ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ಜುಲೈ 15ರಿಂದ ಪಿಯು ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಜುಲೈ 15ರಿಂದ ಆನ್ಲೈನ್ ಮೂಲಕ ತರಗತಿಗಳು ಶುರುಮಾಡುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ.
ಮೊದಲ ಹಂತದಲ್ಲಿ ಆನ್ಲೈನ್ ಮೂಲಕ ತರಗತಿಗಳನ್ನು ಆರಂಭಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಭೌತಿಕ ತರಗತಿ ಆರಂಭ ವಿಚಾರವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಜುಲೈ ಅಂತ್ಯದ ವೇಳೆಗೆ ತರಗತಿಗಳಲ್ಲೇ ಕುಳಿತು ಪಾಠ (ಭೌತಿಕ ತರಗತಿಗಳು) ಕೇಳುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಕಳೆದ ಏ.27ರಿಂದ ಲಾಕ್ಡೌನ್ ವಿಧಿಸಿತ್ತು. ಈ ವೇಳೆ ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಘೋಷಿಸಿತ್ತು. ಮಕ್ಕಳ ಆರೋಗ್ಯ ಹಿತಾದೃಷ್ಟಿಯಿಂದ ನಡೆಯಬೇಕಿದ್ದ ಪಿಯು ಪರೀಕ್ಷೆಯನ್ನು ರದ್ಧುಗೊಳಿಸಿದೆ. ಎಸ್ಎಸ್ಎಲ್ಸಿ ಮತ್ತು ಪ್ರಥಮ ಪಿಯು ಅಂಕಗಳನ್ನು ಅವಲೋಕಿಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಂಕವನ್ನು ನೀಡಲು ನಿರ್ಧರಿಸಿದ್ದು, ಈಗ ಅದಕ್ಕೂ ಕೋರ್ಟ್‌ನಿಂದ ತಡೆ ನೀಡಲಾಗಿದೆ.
ಹಂತ ಹಂತವಾಗಿ ಶೈಕ್ಷಣಿಕ ವರ್ಷಾರಂಭಕ್ಕೆ ಮುಂದಾದ ಶಿಕ್ಷಣ ಇಲಾಖೆ, ಮೊದಲ ಹಂತದಲ್ಲಿ ಆನ್ಲೈನ್ ಮೂಲಕ ತರಗತಿ ಶುರುಮಾಡಲು ನಿರ್ಧರಿಸಿದೆ. ಪ್ರಥಮ ಪಿಯು ಪಾಸಾದ ವಿದ್ಯಾರ್ಥಿಗಳಿಗೆ ಮೊದಲು ಆನ್ಲೈನ್ ಮೂಲಕ ಶಿಕ್ಷಣ ನೀಡಲಾಗುವುದು.
ನಂತರ ಕೊರೊನಾ ಸ್ಥಿತಿಗತಿ ನೋಡೊಕೊಂಡು ಭೌತಿಕ ತರಗತಿಗಳ ಪ್ರಾರಂಭಕ್ಕೆ ಚಿಂತನೆ ನಡೆಸಲಾಗುವುದು. ಸರ್ಕಾರ ಗ್ರೀನ್ ಸಿಗ್ನಲ್ ನೀಡಿದರೆ ಜುಲೈ ಕೊನೆಯ ವಾರದಿಂದಲೇ ಭೌತಿಕ ತರಗತಿಗಳನ್ನು ಆರಂಭಿಸುತ್ತೇವೆ ಎಂದು ಪಿಯು ಬೋರ್ಡ್ ನಿರ್ದೇಶಕಿ ಆರ್. ಸ್ನೇಹಲ್ ಮಾಹಿತಿ ನೀಡಿದ್ದಾರೆ.