ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪದವಿ ಕಾಲೇಜು ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಬೆಂಬಲ ಸಿಬ್ಬಂದಿಯವರಿಗೆ ಜೂನ್ 26 ಮತ್ತು 27ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಜಿಲ್ಲೆಯಾದ್ಯಂತ ಇರುವ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಹಾಕುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ಲಸಿಕಾಕರಣ ನಡೆಸಲಾಗುತ್ತಿದ್ದು, ಸರ್ಕಾರದ ಮಾರ್ಗಸೂಚಿಗಳನ್ವಯ ಮುಂದಿನ ತಿಂಗಳಿಂದ ಕಾಲೇಜುಗಳು ಪ್ರಾರಂಭವಾಗುವ ಸಾಧ್ಯತೆ ಇರುವುದರಿಂದ, ಕಾಲೇಜು ಆರಂಭಕ್ಕೂ ಪೂರ್ವದಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಬೆಂಬಲ ಸಿಬ್ಬಂದಿಯವರಿಗೆ ಲಸಿಕೆ ಹಾಕಲು ಸೂಚಿಲಾಗಿದೆ.
ಅರ್ಹ 18 ವರ್ಷ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳು ಅವರ ಕಾಲೇಜಿನ ಮುಖ್ಯಸ್ಥರ ಸಹಿ ಪಡೆದಿರುವ ಪತ್ರದೊಂದಿಗೆ ಲಸಿಕಾಕರಣ ಕೇಂದ್ರಕ್ಕೆ ಹಾಜರಾಗಿ ಕೋವಿಡ್ ಲಸಿಕೆ ಪಡೆಯಬಹುದು.
ವಿಶೇಷವಾಗಿ 18 ವರ್ಷ ಮೀರಿದ CET ಪರೀಕ್ಷೆ ಬರೆಯಲು ಸನ್ನದ್ಧರಾಗಿರುವ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾಭ್ಯಾಸ ಮತ್ತು ಉದ್ಯೋಗದ ನಿಮಿತ್ತ ಹೊರದೇಶಗಳಿಗೆ ತೆರಳುತ್ತಿರುವವರು ಸಹ ಈ ದಿನಗಳಂದು ಲಸಿಕಾ ಕೇಂದ್ರಗಳಿಗೆ ಹಾಜರಾಗಿ ಲಸಿಕೆ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.