ಹಾವೇರಿ: ಸವಣೂರ ತಾಲೂಕಿನ 10 ಸಾವಿರ ರೈತರಿಗೆ 2019-20ನೇ ಸಾಲಿನ ಬೆಳೆ ನಷ್ಟ ಪರಿಹಾರದ ಬಾಕಿ ಉಳಿದಿದ್ದ ರೂ. ಐದು ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಈ ಸಂಜೆಯೊಳಗಾಗಿ ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2019-20ನೇ ಸಾಲಿನ ಬೆಳೆನಷ್ಟ ಪರಿಹಾರ ಹಣ ಬಾಕಿ ಉಳಿದಿದ್ದು ಈ ಕುರಿತಂತೆ ಜಿಲ್ಲಾಡಳಿತದೊಂದಿಗೆ ನಡೆಸಿದ ವಿಡಿಯೋ ಸಭೆಯಲ್ಲಿ ವರದಿ ಕಳುಹಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಬಾಕಿ ಉಳಿದುಕೊಂಡಿದ್ದ ಐದು ಕೋಟಿ ರೂ. ಬೆಳೆ ನಷ್ಟ ಪರಿಹಾರ ಬಿಡುಗಡೆಗೆ ಮನವಿಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ಸರ್ಕಾರ ಹಣ ಬಿಡುಗಡೆ ಮಾಡಿದೆ. 10 ಸಾವಿರ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಹೇಳಿದರು.