ಹಾವೇರಿ: ಬಿಜೆಪಿ ಶಾಸಕ ಸಿ.ಎಂ. ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ನಲ್ಲಿ ಟಿಕೆಟ್ ಫೈಟ್ ಶುರುವಾಗಿದೆ.
ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ನೇತೃತ್ವದಲ್ಲಿ ಕೆಲವು ಕಾಂಗ್ರೆಸ್ ಕಾರ್ಯರ್ತರು ಮತ್ತು ಮುಖಂಡರು ನಿನ್ನೆ ಸಭೆ ನಡೆಸಿದ್ದಾರೆ. ಹಾನಗಲ್ ತಾಲೂಕಿನವರಿಗೆ ಪಕ್ಷದ ಟಿಕೆಟ್ ನೀಡುವಂತೆ ಸಭೆಯಲ್ಲಿ ಒತ್ತಾಯ ಮಾಡಿದ್ದು, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆಗೆ ಪಕ್ಷದ ಟಿಕೆಟ್ ನೀಡದಂತೆ ಪರೋಕ್ಷವಾಗಿ ಒತ್ತಾಯ ಕೇಳಿಬಂದಿದೆ.
ಹಾನಗಲ್ ತಾಲೂಕಿನ ಯಾರಿಗಾದರೂ ಟಿಕೆಟ್ ನೀಡುವಂತೆ ಗ್ರಾಮ ಮಟ್ಟದಿಂದ ಹೋರಾಟ ಮಾಡಲು ನಿರ್ಧಾರ ಮಾಡಿದ್ದು, ಒಂದು ವೇಳೆ ತಾಲೂಕಿನವರನ್ನು ಬಿಟ್ಟು ಅನ್ಯರಿಗೆ ಟಿಕೆಟ್ ನೀಡಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂಬ ಸಂದೇಶವನ್ನು ಪಕ್ಷದ ಹೈಕಮಾಂಡ್ ರವಾನಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಮತ್ತು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಸೇರಿದಂತೆ ಪಕ್ಷದ ಹಲವು ಮುಖಂಡರು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಈ ನಡುವೆ ಪಕ್ಷದ ಹೈ ಕಮಾಂಡ್ ತಾಲೂಕಿನವರು ಯಾರೇ ಆಗಲಿ ಅವರಿಗೆ ಟಿಕೆಟ್ ನೀಡಿದರೆ ಗೆಲುವಿಗೆ ಎಲ್ಲರೂ ಒಂದುಗೂಡಿ ಶ್ರಮಿಸೋಣ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ಸಭೆಯಲ್ಲಿ ನೀಡಿದ್ದಾರೆ ಎನ್ನಲಾಗಿದೆ.