ಮೈಸೂರು: ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಿ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಕೊರೊನಾ ಆತಂಕ ಇನ್ನು ಕಡಿಮೆಯಾಗಿಲ್ಲ. ಈ ನಡುವೆ ಆಷಾಢದಲ್ಲಿ ದೇವಸ್ಥಾನಕ್ಕೆ ಹೆಚ್ಚು ಹೆಚ್ಚು ಭಕ್ತರು ಆಗಮಿಸುತ್ತಾರೆ.
ಹೀಗೆ ಹೆಚ್ಚು ಭಕ್ತರು ಆಗಮಿಸಿದರೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಜಿಲ್ಲಾಡಳಿತ ಚಾಮುಂಡಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ಹೇರಿದ್ದು, ನಾಲ್ಕು ಆಷಾಢ ಶುಕ್ರವಾರ ಮತ್ತು ಎರಡು ಅಮಾವಾಸ್ಯೆ ದಿನ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.
ಯಾವ ದಿನಗಳಂದು ನಿರ್ಬಂಧ
ಆಷಾಢ ಅಮಾವಾಸ್ಯೆ- ಜುಲೈ 9, ಮೊದಲನೇ ಆಷಾಢ ಶುಕ್ರವಾರ- ಜುಲೈ 16, ಎರಡನೇ ಆಷಾಢ ಶುಕ್ರವಾರ, ಅಮ್ಮನವರ ವರ್ಧಂತಿ – ಜುಲೈ 23.
ಮೂರನೇ ಆಷಾಢ ಶುಕ್ರವಾರ- ಜುಲೈ 30, ನಾಲ್ಕನೇ ಆಷಾಢ ಶುಕ್ರವಾರ- ಆಗಸ್ಟ್ 6, ಭೀಮನ ಆಮಾವಾಸ್ಯೆ – ಆಗಸ್ಟ್ 8.
ಇದರ ಜತೆಗೆ ಆಷಾಢ ಮಾಸದ ಶನಿವಾರ, ಭಾನುವಾರ ಮತ್ತು ಸರ್ಕಾರಿ ಸಾರ್ವತ್ರಿಕ ರಜಾ ದಿನಗಳಂದೂ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇಂದಿನಿಂದ (ಜುಲೈ 6) ಪ್ರತಿದಿನ ಸಂಜೆ 6 ಗಂಟೆ ನಂತರವೂ ಭಕ್ತರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
ಕೊರೊನಾ ಹರಡುವ ಭೀತಿ ಹಿನ್ನೆಲೆ ಜಿಲ್ಲಾಡಳಿತ ಈ ನಿರ್ಧಾರ ತೆಗೆದುಕೊಂಡಿದೆ. ಚಾಮುಂಡಿ ಬೆಟ್ಟಕ್ಕೆ ಕೇವಲ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದು, ಅರ್ಚಕರಿಂದ ಪೂಜಾ, ವಿಧಿವಿಧಾನ ಕಾರ್ಯಕ್ರಮಗಳು ನಡೆಸಲು ಯಾವುದೇ ಅಡ್ಡಿ ಇಲ್ಲ ಎಂದು ತಿಳಿಸಿದೆ.