ಮೈಸೂರು: ಯಡಿಯೂರಪ್ಪನವರ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡಿದರೆ, ಮಠಾಧೀಶರು ಮಠ ಬಿಟ್ಟು ಓಡಬೇಕಾಗುತ್ತದೆ ಎಂದು ಮತ್ತೆ ಸಿಎಂ ಬಿಎಸ್ವೈ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಗುಡುಗಿದ್ದು, ಈ ಮೂಲಕ ಮಠಾಧೀಶರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಸುಳಿವನ್ನು ನೀಡಿದ್ರ ಎಂಬ ಪ್ರಶ್ನೆ ಮೂಡುವಂತಾಗಿದೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನಾಗಲೇ ಕೇಂದ್ರ ಸಚಿವನಾಗಿದ್ದೆ, ಆ ವೇಳೆ ಬಿಜೆಪಿಯಲ್ಲಿ ಯಡಿಯೂರಪ್ಪ ಮಂತ್ರಿನೂ ಆಗಿರಲಿಲ್ಲ. ನಾನು ಏಕಾಂಗಿಯಲ್ಲ, ಸಾಕಷ್ಟು ಸಚಿವರು ಸಂಪರ್ಕದಲ್ಲಿದ್ದಾರೆ. ಎಲ್ಲರೂ ನೀವು ಮಾಡುತ್ತಿರುವುದು ನ್ಯಾಯಯುತ ಹೋರಾಟ. ನಿಮ್ಮ ಹೋರಾಟವನ್ನು ಮುಂದುವರಿಸಿ ನಾವು ಬಾಹ್ಯ ಬೆಂಬಲ ನೀಡುತ್ತೇವೆ ಎಂದು ಅವರು ನನಗೆ ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ನನ್ನ ಹೋರಾಟದ ಫಲ ಫಲಿಸಲಿದೆ ಎಂದರು.
ಇನ್ನು ಸದಾನಂದಗೌಡ, ಜಗದೀಶ್ ಶೆಟ್ಟರ್ಗಿಂತ ನಾನು ಹಿರಿಯ. ಯಡಿಯೂರಪ್ಪ ಮಂತ್ರಿನೂ ಆಗಿರಲಿಲ್ಲ, ಆಗಲೇ ಕೇಂದ್ರ ಸಚಿವನಾಗಿದ್ದೆ. ನಾನು ಹಿಂದೆಯೇ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ, ಕೆಲವು ಅವಕಾಶಗಳನ್ನು ನಾನೇ ಮಿಸ್ ಮಾಡಿಕೊಂಡಿದ್ದೇನೆ. ಇನ್ನು ನನ್ನ ರಾಜಕೀಯ ಜೀವನ ಅಂತ್ಯವಾದರೂ ಪರವಾಗಿಲ್ಲ. ಭ್ರಷ್ಟಾಚಾರ, ಕುಟುಂಬಶಾಹಿ ವಿರುದ್ಧ ನನ್ನ ಹೋರಾಟ ನಿಲ್ಲಿಸುವುದಿಲ್ಲ ಎಂದು ಕಿಡಿಕಾರಿದರು.
ಯಡಿಯೂರಪ್ಪನವರೇ ಸಾಕು ಗೌರವಯುತವಾಗಿ ನಿವೃತ್ತಿಯಾಗಿ. ನಿಮ್ಮ ಭ್ರಷ್ಟಾಚಾರದ ಕರ್ಮಕಾಂಡವೇ ನಮ್ಮ ಬಳಿ ಇದೆ. ಯಡಿಯೂರಪ್ಪನವರ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡಿದರೆ, ಮಠಾಧೀಶರು ಮಠ ಬಿಟ್ಟು ಓಡಬೇಕಾಗುತ್ತದೆ. ನಮ್ಮ ರಾಜ್ಯದ ಹಿತದೃಷ್ಟಿಯಿಂದ, ಪಕ್ಷದ ಹಿತದೃಷ್ಟಿಯಿಂದ ಹಾಗೂ ನಿಮ್ಮ ಕುಟುಂಬದ ಹಿತದೃಷ್ಟಿಯಿಂದಲೂ ನಿವೃತ್ತಿ ಒಳ್ಳೆಯದು ಎಂದು ತಿಳಿಸಿದರು.
ಯತ್ನಾಳ್ ರಾಜೀನಾಮೆ ನೀಡಿ ಹೊರಬರಲಿ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮೊದಲು ರಾಜೀನಾಮೆ ನೀಡಲಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ವಿಜಯೇಂದ್ರ ಜೊತೆ ಹೊಂದಿಕೊಂಡಿದ್ದಾರೆ. ಪರಸ್ಪರ ಭೇಟಿಯಾಗಿ ಸಲಹೆ ಕೊಡುತ್ತಾರೆ ಎಂದು ಆರೋಪಿಸಿದರು.