ಚಾಮರಾಜನಗರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪತ್ರನ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ರಾಜ್ಯದಲ್ಲಿ ಯಾರೂ ನಿರೀಕ್ಷೆ ಮಾಡದ ವ್ಯಕ್ತಿ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಕುರಿತು ಹೈಕಮಾಂಡ್ ಕಾದು ನೋಡುತ್ತಿದೆ. ಎಷ್ಟು ಬೇಗ ಸಿಎಂ ಬಗಲಾಗುತ್ತಾರೋ ಅಷ್ಟು ಬೇಗ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾರೂ ನಿರೀಕ್ಷೆ ಮಾಡದ ವ್ಯಕ್ತಿ ಸಿಎಂ ಆಗುತ್ತಾರೆ. ಒಳ್ಳೆಯವರು, ಪ್ರಾಮಾಣಿಕರು, ಹಿಂದುತ್ವದ ಪರ ಇರುವವರು ಸಿಎಂ ಆಗುತ್ತಾರೆ ನೋಡುತ್ತಿರಿ ಎಂದು ಅಚ್ಚರಿಯ ಹೇಳಿಕೆ ನೀಡುವ ಮೂಲಕ ಇಂದು ರಾಜಕೀಯ ನೂತನ ಚರ್ಚೆಗೆ ಗ್ರಾಸವಾಗಿದ್ದಾರೆ.
ಪಕ್ಷದ ವರಿಷ್ಠರು ಒಂದು ವೇಳೆ ನನಗೆ ಅವಕಾಶ ಕೊಟ್ಟರೆ ಬೇಡ ಅನ್ನಲ್ಲ. ಅಲ್ಲದೇ ಕೆಲವು ಶಾಸಕರು ಟಿಕೆಟ್ ಕೊಡಲ್ಲ ಅನ್ನೋ ಭಯದಿಂದ ಮಾತನಾಡುತ್ತಿಲ್ಲ ಅಂತಾ ತಮ್ಮದೇ ಪಕ್ಷದವರ ಬಗ್ಗೆ ಕಿಡಿಕಾರಿದರು.
ಅಖಿಲ ಭಾರತ ಪಂಚಮಶಾಲಿ ಮಠಾಧೀಶರ ಒಕ್ಕೂಟ ಸ್ಥಾಪನೆ ರಾಜಕೀಯ ಪ್ರೇರಿತವಾಗಿದೆ. ನಿನ್ನೆ ಸಭೆ ಸೇರಿದ್ದವರು ಪಂಚಮಶಾಲಿ ಪೀಠಾಧಿಪತಿಗಳಲ್ಲ, ಅವರೆಲ್ಲ ವಿರಕ್ತ ಮಠದ ಸ್ವಾಮೀಜಿ ಎಂದು ಹೇಳಿದರು.
ಇನ್ನು ರಾಜ್ಯ ರಾಜಕೀಯದಲ್ಲಿ ಒಂದು ಕಡೆ ಸಚಿವ ಸಿ.ಪಿ ಯೋಗೇಶ್ವರ್ ಬಿಎಸ್‌ವೈ ಮತ್ತು ಕುಟುಂಬದವರ ವಿರುದ್ಧ ಕಿಡಿಕಾರುತ್ತಿದ್ದರೆ ಇತ್ತ ಯತ್ನಾಳ್ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಮತ್ತೆ ಮತ್ತೆ ತೋರಿಸಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಸಿಎಂ ಬದಲಾವಣೆಯೇ ಅಸ್ತ್ರವಾ? ಎಂಬುದನ್ನು ಕಾದು ನೋಡಬೇಕಿದೆ.