ಬೆಳಗಾವಿ: ನಾಗಾಲ್ಯಾಂಡ್ನಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಅಪಘಾತವಾಗಿ ಮೃತಪಟ್ಟಿದ್ದ ಯೋಧನ ಪಾರ್ಥಿವ ಶರೀರ ಇಂದು (ಜುಲೈ 13) ಸ್ವಗ್ರಾಮಕ್ಕೆ ಆಗಮಿಸಿದ್ದು, ತಂದೆಯ ಪಾರ್ಥಿವ ಶರೀರವನ್ನು ಯೊಧನ ಮಗ ಸೇನೆಯ ಸಮವಸ್ತ್ರ ಧರಿಸಿ ಸ್ವಾಗತಿಸಿದ್ದಾನೆ.
ಜಿಲ್ಲೆಯ ಗೋಕಾಕ್ ತಾಲೂಕಿನ ಶಿವಾಪುರ ಗ್ರಾಮದ ಮಂಜುನಾಥ ಗೌಡನ್ನವರ ಮೃತ ಯೋಧ. ಗ್ರಾಮಕ್ಕೆ ಪಾರ್ಥಿವ ಶರೀರ ಬರುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದ್ದು, ಪಾರ್ಥಿವ ಶರೀರ ಬರುವ ದಾರಿಯಲ್ಲಿ ಹೂವನ್ನು ಹಾಕಿ, ಕೈಯಲ್ಲಿ ದೇಶದ ಬಾವುಟ ಹಿಡಿದು ಊರಿನ ಜನ ಸ್ವಾಗತಿಸಿದರು.
ಅಪ್ಪನ ರೀತಿ 5 ವರ್ಷದ ಮಗ ಸ್ವರೂಪ್ ಸೇನೆಯ ಸಮವಸ್ತ್ರ ಧರಿಸಿ ಅಪ್ಪನ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದ್ದಾನೆ. ಮಗನನ್ನು ನೋಡಿ ಶಿವಾಪುರ ಗ್ರಾಮದ ಜನ ಮಮ್ಮಲ ಮರುಗಿದ್ದಾರೆ. ಇಂದು ಸ್ವಗ್ರಾಮ ಶಿವಾಪುರದಲ್ಲಿ ಯೋಧ ಮಂಜುನಾಥನ ಅಂತ್ಯಕ್ರಿಯೆ ನೆರವೇರಲಿದೆ.
ಸುಮಾರು 18 ವರ್ಷದಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಮಂಜುನಾಥ, ಕರ್ತವ್ಯದಲ್ಲಿದ್ದ ವೇಳೆ ಗಸ್ತು ತಿರುಗುತ್ತಿದ್ದಾಗ ವಾಹನ ಅಪಘಾತ ಸಂಭವಿಸಿದೆ. ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ನಲ್ಲಿ ಯೋಧನಾಗಿ ನೇಮಕಗೊಂಡಿದ್ದ ಇವರು ನಾಗಾಲ್ಯಾಂಡ್ ಗಡಿಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗಸ್ತು ತಿರುಗುತ್ತಿದ್ದಾಗ ಅರಣ್ಯ ಪ್ರದೇಶದ ರಸ್ತೆಯಲ್ಲಿ ಅಪಘಾತ ಸಂಭವಿಸಿ ಅಸುನೀಗಿದ್ದಾರೆ.