ಜೇವರ್ಗಿ: ಪಟ್ಟಣದ ಮಿನಿ ವಿಧಾನಸೌಧ ಕಾರ್ಯಾಲಯದಲ್ಲಿ ಗಬ್ಬೆದ್ದು ನಾರುತ್ತಿರುವ ಶೌಚಾಲಯ ಸ್ವಚ್ಛತೆಗೆ ಡಾ.ವಿಷ್ಣು ಸೇನಾ ಸಮಿತಿ ಒತ್ತಾಯಿಸಿದೆ.
ಡಾ.ವಿಷ್ಣು ಸೇನಾ ಸಮಿತಿ ಜೇವರ್ಗಿ ತಾಲೂಕು ಅಧ್ಯಕ್ಷ ಬಸವರಾಜ ಬಿ.ಬಾಗೇವಾಡಿ ನೇತೃತ್ವದಲ್ಲಿ ಮಂಗಳವಾರ ತಾಲೂಕು ದಂಡಾಧಿಕಾರಿ ವಿನಯಕುಮಾರ ಪಾಟೀಲ ಅವರಿಗೆ ಮನವಿ ನೀಡಲಾಯಿತು.
ಮಿನಿ ವಿಧಾನಸೌಧದಲ್ಲಿ ಹತ್ತಾರು ಇಲಾಖೆಯ ಕಚೇರಿಗಳು ಕಾರ್ಯ ನಿರ್ವಹಿಸುತ್ತವೆ. ಮಹಿಳೆಯರು ವೃದ್ಧರು ಅಂಗವಿಕಲರು, ಶಾಲಾ- ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ದಿನಾಲೂ ಕೆಲಸದ ಸಲುವಾಗಿ ವಿವಿಧ ಗ್ರಾಮಗಳಿಂದ ಬರುತ್ತಾರೆ. ಆದರೆ ಶೌಚಾಲಯ ಸ್ವಚ್ಛತೆ ಇಲ್ಲದೇ ಗಬ್ಬೆದ್ದು ನಾರುತ್ತಿದೆ.
ಜತೆಗೆ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿದ್ದು ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ ಆದ್ದರಿಂದ ಕೂಡಲೇ ತಾವು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸೂಕ್ತ ಶೌಚಾಲಯ ಕಲ್ಪಿಸಬೇಕೆಂದು ಮನವಿ ಸಲ್ಲಿಸಿದರು.
ಡಾ.ವಿಷ್ಣು ಸೇನಾ ಸಮಿತಿಯ ರವಿಕುಮಾರ, ಶೆಟ್ಟಪ್ಪ ಇತರರು ಇದ್ದರು.