ಬೆಂಗಳೂರು: ಬೆಂಗಳೂರಿಗೆ ಆಗಮಿಸಿರುವ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚರ್ಚಿಸಿ, ಶುಭ ಮುಹೂರ್ತ ನಿಗದಿ ಮಾಡಿ, ಮೇಕೆದಾಟು ಯೋಜನೆಯ ಭೂಮಿ ಪೂಜೆಗೆ ದಿನ ಗುರುತಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ,ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ಸಂದರ್ಭಗಳಲ್ಲಿ ಟೆಂಡರ್ ಕರೆಯುವ ಮೊದಲೇ ಭೂಮಿ ಪೂಜೆ ಮಾಡಿರುವಂತೆಯೇ ಈಗಲೂ ಮಾಡಲಿ ಎಂದು ತಿಳಿಸಿದರು.
ಇನ್ನು ಡಬ್ಬಲ್ ಇಂಜಿನ್ ಸರ್ಕಾರ ಬಂದರೆ ರಾಜ್ಯದ ಅಭಿವೃದ್ಧಿಗೆ ಬುನಾದಿ ಬೀಳಲಿದೆ ಎಂದು ಹೇಳಿಕೊಂಡ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಈಗ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿ ಎಂದರು.
ಪಕ್ಷ ಬೇರೆ ಸರ್ಕಾರ ಬೇರೆ ಅಂದರೆ ಪಕ್ಷದಿಂದಲೇ ತಾನೆ ಅಧಿಕಾರಕ್ಕೆ ಬಂದಿರೋದು. ಶೇಖಾವತ್ ಅವರು ಒಳ್ಳೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ನಮ್ಮ ರಾಜ್ಯಕ್ಕೂ ಒಳ್ಳೆ ಕೆಲಸ ಮಾಡಲಿ ಎಂದರು.
ಇನ್ನು ರಾಜ್ಯದ 25 ಬಿಜೆಪಿ ಸಂಸದರು ರಾಜ್ಯದ ಹಿತಕ್ಕೆ ಬೀಗ ಹಾಕಿಕೊಂಡಿದ್ದಾರೆ. ರಾಜ್ಯದ ಅಭಿವೃದ್ಧಿ ಅವರಿಗೆ ಆಗಬೇಲಕಿಲ್ಲವೇನೋ ಎಂದು ಅಸಮಾಧಾನ ವ್ಯಕ್ತಪಡಿಸಿದರು.