ಬೆಂಗಳೂರು: ಒಬ್ಬ ಭ್ರಷ್ಟ ಸಿಎಂ ಹೋಗಬೇಕು. ಯಡಿಯೂರಪ್ಪ ಬದಲಾವಣೆಯಿಂದ ಕಾಂಗ್ರೆಸ್ಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ. ಬದಲಾಗಿ ಒಬ್ಬ ಕರೆಪ್ಟ್ ಸಿಎಂ ಹೋಗ್ತಿದ್ದಾರೆ ಅನ್ನೋದು ಮುಖ್ಯ ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾಯಿಸ್ತಾರೆ ಎಂದು ನಾನು ಈ ಮೊದಲೇ ಹೇಳಿದ್ದೆ. ಆಗ ಯಾರು ನನ್ನ ಮಾತನ್ನು ನಂಬಿರಲಿಲ್ಲ. ಈಗ ಆ ಕಾಲ ಸನ್ನಿಹಿತವಾಗಿದೆ ಎಂದು ನೋಡಿ ಎಂದರು.
ಯಡಿಯೂರಪ್ಪ ಬದಲಾವಣೆಯಿಂದ ಅವಧಿಗೂ ಮುನ್ನ ಚುನಾವಣೆ ಬರಲಿದೆ ಅಂತ ನನಗೆ ಅನಿಸಲ್ಲ. ಸಿಎಂ ಬದಲಾದರೂ ಅವಧಿಗೂ ಮುನ್ನ ಎಲೆಕ್ಷನ್ ಆಗುತ್ತೆ ಅನಿಸುತ್ತಿಲ್ಲ. ಚುನಾವಣೆ ಬಂದರೆ ಎದುರಿಸಲು ಕಾಂಗ್ರೆಸ್ ಸಿದ್ಧವಿದೆ. ಯಾವ ಸಮಯದಲ್ಲಿ ಬಂದರೂ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ದೆಹಲಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಯಾವ ಕಾರಣಕ್ಕೆ ಕರೆದಿದ್ದಾರೆ ಎಂದು ನಿಮಗೆ ಹೇಳಕ್ಕೆ ಆಗುತ್ತಾ? ನನಗೂ ಅದರ ಬಗ್ಗೆ ಗೊತ್ತಿಲ್ಲ. ರಾಹುಲ್ ಗಾಂಧಿ ನಮ್ಮ ವರಿಷ್ಠರು ಕರೆದಿದ್ದಾರೆ ಹೋಗುತ್ತಿದ್ದೇನೆ ಎಂದರು.
ಪದಾಧಿಕಾರಿಗಳ ನೇಮಕ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ನಿಮಗೆ ಹೇಳಿದ್ದಾರಾ? ಯಾವ ವಿಚಾರಕ್ಕೆ ಕರೆದಿದ್ದಾರೆ ಅನ್ನೋದು ಯಾರಿಗೆ ಗೊತ್ತು. ಸುಮ್ಮನೆ ಊಹಾಪೋಹ ಮಾಡಬೇಡಿ ಎಂದು ಮಾಧ್ಯಮದವರಿಗೆ ಸಲಹೆ ನೀಡಿದರು.