ಬೆಂಗಳೂರು: ಕೊರೊನಾ ಸೋಂಇನ ಪ್ರಮಾಣ ಕಡಿಮೆಯಾಗುತ್ತಿದ್ದುಈ ನಡುವೆಯೇ ಅವಳಿ ನಗರಗಳಾದ ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡಿದೆ.
ಆಗಸ್ಟ್ 16 ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ಆಗಸ್ಟ್ 23 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದೆ. ಸೆಪ್ಟೆಂಬರ್ 6 ರಂದು ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.
ಎರಡು ವರ್ಷಗಳಿಂದ ನಗರ ಪಾಲಿಕೆ ಚುನಾವಣೆಗಳು ನನೆಗುದಿಗೆ ಬಿದ್ದಿದ್ದವು. ಆದರೆ ಈ ಬಾರಿ ರಾಜ್ಯ ಚುನಾವಣಾ ಆಯೋಗ ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳಿಗೆ ಚುನಾವಣೆ ಘೋಷಿಸಿದೆ.
ಹೀಗಾಗಿ ಈ ಮೂರು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯ ಸದ್ದು ಗದ್ದಲ ಹೆಚ್ಚಾಗುವುದು ಖಚಿತವಾದಂತಾಗಿದೆ. ಸದ್ಯ ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಭೀತಿ ವ್ಯಾಪಿಸುತ್ತಿದ್ದು, ಮಹಾನಗರ ಪಾಲಿಕೆ ಚುನಾವಣೆಗಳ ಇದರ ನಡುವೆಯೇ ನಡೆಯಬೇಕಾದಂತಾಗಿದೆ.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್‌ಗಳಲ್ಲಿ ಚುನಾವಣೆ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಸಲು ಆಗಸ್ಟ್ 23 ಕೊನೆಯ ದಿನವಾಗಿದೆ. ಸೆಪ್ಟೆಂಬರ್ 3 ರಂದು ಮತದಾನ ಮತ್ತು 6ನೇ ಸೆಪ್ಟೆಂಬರ್‌ನಲ್ಲಿ ಮತ ಎಣಿಕೆ ನಡೆಯಲಿದೆ.
ಈಗಾಗಲೇ ಆ.4ರಂದು ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಸ್ಪಷ್ಟ ನಿರ್ಧಾರಕ್ಕೆ ಬರುವಂತೆ ಸೂಚನೆ ನೀಡಿ, ವಿಚಾರಣೆಯನ್ನು ಆ.13ಕ್ಕೆ ಮುಂದೂಡಿತ್ತು. ಚುನಾವಣಾ ವೇಳಾಪಟ್ಟಿಯ ವಿವರದೊಂದಿಗೆ ಕೋರ್ಟ್‌ಗೆ ಮಾಹಿತಿ ನೀಡಬೇಕಾದ ಅನಿವಾರ್ಯತೆ ಇರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಇಂದು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.
ರಾಜ್ಯ ಚುನಾವಣಾ ಆಯೋಗವು ಸಂವಿಧಾನದ ಪರಿಚ್ಛೇದ 243 ಜೆಡ್ಎ ಹಾಗೂ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976ರ ಪ್ರಕರಣ 55 ಮತ್ತು ಕರ್ನಾಟಕ ಪೌರ ನಿಗಮಗಳ (ಚುನಾವಣೆ) ನಿಯಮಗಳು, 1979ರ ನಿಯಮ 3(1) ರಲ್ಲಿ ಪ್ರದತ್ತವಾಗಿರುವ ಅಧಿಕಾರದ ಮೇರೆಗೆ ಈ ಕೆಳಗೆ ನಮೂದಿಸಿರುವ ಮೂರು ಮಹಾನಗರ ಪಾಲಿಕೆಗಳಿಗೆ ಈ ಕೆಳಕಂಡ ಚುನಾವಣಾ ವೇಳಾಪಟ್ಟಿಯನುಸಾರ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಆದೇಶಿಸಿದೆ.
ಚುನಾವಣೆ ನಡೆಯುವ ಮಹಾನಗರ ಪಾಲಿಕೆಗಳು
1. ಬೆಳಗಾವಿ ಮಹಾನಗರ ಪಾಲಿಕೆ- 58 ವಾರ್ಡ್‌ಗಳು 2. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ- 83 ವಾರ್ಡ್‌ಗಳು 3. ಕಲಬುರಗಿ ಮಹಾನಗರ ಪಾಲಿಕೆ- 55 ವಾರ್ಡ್‌ಗಳು.
ಮಹಾನಗರ ಚುನಾವಣಾ ವೇಳಾಪಟ್ಟಿ ಇಲ್ಲಿದೆ: 1. ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನ – ಆಗಸ್ಟ್ 16, 2021 (ಸೋಮವಾರ)
2. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕೊನೆಯ ಆಗಸ್ಟ್ 23, 2021 (ಸೋಮವಾರ)
3. ಅಭ್ಯರ್ಥಿಗಳ ನಾಮಪತ್ರ ಪರಿಶೀಲಿಸುವ ದಿನಾಂಕ ಆಗಸ್ಟ್ 24, 2021 (ಮಂಗಳವಾರ)
4. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕ ಆಗಸ್ಟ್ 26 (ಗುರುವಾರ)
5. ಮತದಾನ ನಡೆಸಬೇಕಾದ ದಿನಾಂಕ (ಮತದಾನದ ಸಮಯ ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ)- ಸೆಪ್ಟೆಂಬರ್ 3, 2021 (ಶುಕ್ರವಾರ)
6. ಮರು ಮತದಾನ ಅವಶ್ಯವಿದ್ದಲ್ಲಿ ಸೆಪ್ಟೆಂಬರ್ 5, 2021 (ಭಾನುವಾರ)
7. ಮತಗಳ ಎಣಿಕೆಯು ಬೆಳಗ್ಗೆ ಗಂಟೆಯಿಂದ (ಬೆಳಗಾವಿ, ಹುಬ್ಬಳ್ಳಿ- ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ) ಸೆಪ್ಟೆಂಬರ್ 6, 2021 (ಸೋಮವಾರ)
8. ಚುನಾವಣೆ ಪ್ರಕ್ರಿಯೆ ಮತ್ತು ಅಧಿಸೂಚನೆ ಕೊನೆಗೊಳ್ಳುವ ದಿನಾಂಕ ಸೆಪ್ಟೆಂಬರ್ 06, 2021 (ಸೋಮವಾರ)