ಬೆಂಗಳೂರು: ನಗರದ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಐಷಾರಾಮಿ ಕಾರುಗಳಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಭಸ್ಮಗೊಳಿಸಿದ ಘಟನೆ ಗುರುವಾರ ನಸುಕಿನ ಜಾವ ನಡೆದಿದ್ದು, ಮೈಕೋ ಲೇ ಔಟ್ ಎಸಿಪಿ ನೇತೃತ್ವದಲ್ಲಿ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳ ಪತ್ತೆಗಾಗಿ ವ್ಯಾಪಕ ಜಾಲ ಬೀಸಿರುವ ಪೊಲೀಸರು ದುಷ್ಕರ್ಮಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸದಲ್ಲಿದ್ದಾರೆ.
ಇಂದು ನಸುಕಿನ ಜಾವ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಈ ಕೃತ್ಯ ನಡೆಸಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮಧ್ಯರಾತ್ರಿ 1:23ರ ಸುಮಾರಿಗೆ ಬಂದ ಇಬ್ಬರು ದುಷ್ಕರ್ಮಿಗಳು ಒಂದು ಲೀಟರ್ ಬಾಟಲ್ ಪೆಟ್ರೋಲ್ ತಂದು ಕಾರಿಗೆ ಬೆಂಕಿ ಹಚ್ಚಿ ಕೆಲವೇ ಹೊತ್ತಿನಲ್ಲಿ ಕೆಲಸ ಮುಗಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಬೊಮ್ಮನಹಳ್ಳಿ ಪೊಲೀಸರಿಂದ ಆರೋಪಿಗಳಿಗಾಗಿ ತಲಾಶ್ ನಡೆಸುತ್ತಿದ್ದಾರೆ. 3 ಪ್ರತ್ಯೇಕ ತಂಡಗಳಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯಲಿದೆ. ಸುದ್ದಗುಂಟೆಪಾಳ್ಯ, ಬೊಮ್ಮನಹಳ್ಳಿ, ತಿಲಕ್ನಗರ ಠಾಣೆ ಸೇರಿ ಮೂರು ಠಾಣೆಗಳ ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ತನಿಖೆ ನಡೆಯಲಿದೆ.
ಶಾಸಕ ಸತೀಶ್ ರೆಡ್ಡಿ ಪ್ರತಿಕ್ರಿಯೆ: ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ವಿಡಿಯೋ ದಾಖಲಾಗಿದೆ. ಮಧ್ಯರಾತ್ರಿ 1.30ರ ಸುಮಾರಿಗೆ ಎರಡು ಕಾರುಗಳು ಬಹುತೇಕ ಸುಟ್ಟುಹೋಗಿವೆ. ಕಾರಿನಿಂದ ಸ್ಫೋಟದ ಸದ್ದು ಕೇಳಿಬಂದಾಗ ನಮಗೆ ಎಚ್ಚರವಾಯಿತು. ಹೋಗಿ ನೋಡುವಾಗ ಕಾರುಗಳು ಹೊತ್ತಿ ಉರಿಯುತ್ತಿದ್ದವು. ನಂತರ ನಂದಿಸುವ ಕಾರ್ಯ ಮಾಡಿದೆವು.
ಈ ದುಷ್ಕೃತ್ಯವನ್ನು ಯಾರು ಮಾಡಿದರು, ಯಾಕೆ ಮಾಡಿದರು ಎಂದು ಗೊತ್ತಾಗುತ್ತಿಲ್ಲ, ನಾನಿಲ್ಲಿ ಯಾವ ಪಕ್ಷದವರ ಮೇಲೆ ಕೂಡ ಆರೋಪ ಹೊರಿಸುತ್ತಿಲ್ಲ, ರಾಜಕೀಯದಲ್ಲಿ ನನಗೆ ಯಾರೂ ಶತ್ರುಗಳಿಲ್ಲ, ಶಿವನ ಮೂರ್ತಿ ಪ್ರತಿಷ್ಠಾಪನೆ ವಿಚಾರ ಕೂಡ ಆಗಿರಲೂಬಹುದು, ಪೊಲೀಸರು ಹಲವು ಆಯಾಮಗಳಿಂದ ತನಿಖೆ ನಡೆಸುತ್ತಿದ್ದು ಆರೋಪಿಗಳು ಸಿಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.