ಬನ್ನೂರು: ಛಲ ಮತ್ತು ಸಾಧಿಸುವ ಗುರಿ ಇದ್ದರೆ ಸಾಧನೆಯ ಶಿಖರವೇರಲು ಸುಲಭಸಾಧ್ಯ. ಜತೆಗೆ ಪ್ರತಿಯೊಬ್ಬರಿಗೂ ಸಾಧಿಸವ ಅವಕಾಶ ಬರುತ್ತದೆ ಆದರೆ ಅದನ್ನು ಕೆಲವರು ಮಾತ್ರ ಉಪಯೋಗಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಪಟ್ಟಣದ ವಿವೇಕಾನಂದ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ರೈತರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲರಲ್ಲೂ ಏನೇ ಸಮಸ್ಯೆ ಬಂದರು ಎದುರಿಸುವ ಶಕ್ತಿಯಿದೆ. ಜವಾಬ್ದಾರಿಯು ಇದೆ. ಕೊಟ್ಟಂತಹ ಕೆಲಸವನ್ನು ನಾವು ಆ ಜವಾಬ್ದಾರಿಯಿಂದ ಮಾಡಿದರೆ ಯಶಸ್ಸು ಕಾಣಲು ಸಾಧ್ಯ. ಮತ್ತೆ ಸಮಾಜದಲ್ಲಿ ಉನ್ನತ ಸ್ಥಾನ ತಾನಾಗಿಯೇ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಇನ್ನು ಪ್ರಾಮಾಣಿಕತೆಯಿಂದ ನಡೆದರೆ ಜೀವನ ಹಸನಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದ ಅವರು, ರೈತರ ಜೀವನ ಹಸನಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರಲಿದೆ, ಹೀಗಾಗಿ ನಿಮ್ಮ ಸಲಹೆ ಸೂಚನೆಗಳು ಬಹಳ ಮುಖ್ಯವಾಗುತ್ತವೆ ಎಂದು ತಿಳಿಸಿದರು.
ಸದ್ಯದಲ್ಲೇ ತೈಲ ಬೆಲೆ ಕಡಿಮೆಯಾಗಲಿದೆ: ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳಕ್ಕೆ ಬಿಜೆಪಿ ಕಾರಣವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಾಗಿರುವುದರಿಂದ ಅನಿವಾರ್ಯವಾಗಿ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ರೈತರ ಜೊತೆ ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸಾಮಾನ್ಯರ ಹಿತಕಾಯಲು ಬೆಲೆ ಕಡಿಮೆ ಮಾಡುವ ಪ್ರಯತ್ನ ಮಾಡಲಾಗುವುದು ಎಂದರು.
ಕೋವಿಡ್-19 ಮಾರ್ಗಸೂಚಿಯ ನಡುವೆಯೂ ಹಲವು ನಿಯಮಗಳನ್ನು ಸಡಿಲಗೊಳಿಸಿ ಗಣೇಶೋತ್ಸವಕ್ಕೆ ಅವಕಾಶ ನೀಡಲಾಗಿದೆ. ಪ್ರಸ್ತುತ 5 ದಿನಗಳ ಹಬ್ಬ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕಿಂತ ಇನ್ನೆನು ಮಾಡಲು ಸಾಧ್ಯ ಎಂದರು.
ಈ ವೇಳೆ ಬನ್ನೂರು ವಿವೇಕಾನಂದ ವಿದ್ಯಾಸಂಸ್ಥೆಯ ಸಂಸ್ಥಾಪಕ ಪ್ರಕಾಶ್ ಮತ್ತಿತರರು ಇದ್ದರು.