ಮೈಸೂರು: ಅತಿವೇಗವಾಗಿ ಬುಲೆಟ್ನಲ್ಲಿ ಬಂದ ಸವಾರ ಹೋಂಡಾ ಆ್ಯಕ್ಟಿವಕ್ಕೆ ಗುದ್ದಿದ ಪರಿಣಾಮ ವೃದ್ಧ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗ್ಗೆ ಮೈಸೂರು ಅರಸು ರಸ್ತೆಯಲ್ಲಿ ನಡೆದಿದೆ.
ದೇವರಾಜ ಮೊಹಲ್ಲಾ ನಿವಾಸಿ ರಾಘವೇಂದ್ರ ಗಾರ್ಮೆಂಟ್ಸ್ ಮಾಲೀಕ ಸತ್ಯಪ್ಪ (70) ಮೃತರು.
ತಮ್ಮ ಮನೆ ದೇವರಾಜ ಮೊಹಲ್ಲಾದಿಂದ ಬೆಳಗ್ಗೆ ಬಟ್ಟೆ ಮಳಿಗೆಗೆ ತೆರೆಯಲು ಅರಸು ರಸ್ತೆ ಕಡೆ ಹೋಗುತ್ತಿದ್ದರು. ಈ ವೇಳೆ ಅಜಾಗರೂಕತೆ ಮತ್ತು ಅತಿವೇಗದಿಂದ ಬುಲೆಟ್ ಬೈಕ್ನಲ್ಲಿ ಬಂದ ಸವಾರ ವೃದ್ಧ ಚಲಿಸುತ್ತಿದ್ದ ಹೋಂಡಾ ಆ್ಯಕ್ಟಿವಾಕ್ಕೆ ಗುದ್ದಿದ್ದರಿಂದ ವಾಹನದಿಂದ ಕೆಳಕ್ಕೆ ಬಿದ್ದಿದ್ದು ಗಂಭೀರ ಗಾಯಗೊಂಡ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದ ದೇವರಾಜ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುನಿಯಪ್ಪ, ಸಿಬ್ಬಂದಿ ಡಾ.ಲಿಂಗರಾಜು, ರವಿ, ರಘು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬುಲೆಟ್ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕೆ.ಆರ್.ವೃತ್ತದ ಕಡೆಯಿಂದ ಅತಿವೇಗದಲ್ಲಿ ವಾಹನ ಸವಾರರು ಬರುತ್ತಿದ್ದು, ಇದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಈ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಸಾರ್ವಜನಿಕರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಘಟನೆ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.