CrimeNEWSನಮ್ಮಜಿಲ್ಲೆ

ಅಕ್ಟೋಬರ್ 23 ರಂದು ಮೆಗಾ ಲೋಕ ಅದಾಲತ್- ರಾಜಿ ಸಂಧಾನಕ್ಕೆ ಅವಕಾಶ: ನ್ಯಾ. ಯಾದವ ವನಮಾಲಾ ಆನಂದರಾವ್

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಹಾವೇರಿ: ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಅಕ್ಟೋಬರ್ 23 ರಂದು ಮೆಗಾ ಲೋಕ ಅದಾಲತ್ ಆಯೋಜಿಸಲಾಗಿದೆ. ಇತ್ಯರ್ಥಕ್ಕೆ ಬಾಕಿ ಇರುವ ರಾಜಿಯಾಗಬಹುದಾದ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಯಾದವ ವನಮಾಲಾ ಆನಂದರಾವ್ ತಿಳಿಸಿದ್ದಾರೆ.

ಈ ಮೆಗಾ ಲೋಕ ಅದಾಲತ್‍ನಲ್ಲಿ ಚೆಕ್ ಅಮಾನ್ಯದ ಪ್ರಕರಣಗಳು, ಆರ್ಥಿಕ ವಸೂಲಾತಿ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು ಸೇರಿದಂತೆ ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಹಕ್ಕೊತ್ತಾಯಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, (ರಾಜಿಯಾಗದ ಪ್ರಕರಣಗಳನ್ನು ಹೊರತುಪಡಿಸಿ) ವೈವಾಹಿಕ/ಕುಟುಂಬ ನ್ಯಾಯಾಲಯಗಳ ಪ್ರಕರಣಗಳು.

ಭೂ- ಸ್ವಾಧೀನ ಪ್ರಕರಣಗಳು, ಕಂದಾಯ ಪ್ರಕರಣಗಳು (ಜಿಲ್ಲಾ ಹಾಗೂ ಉಚ್ಛ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಮಾತ್ರ), ಸಿವಿಲ್ ಪ್ರಕರಣಗಳು (ಬಾಡಿಗೆ ಅನುಭೋಗದ ಹಕ್ಕುಗಳು, ನಿರ್ಬಂಧಾಜ್ಞೆ ಮೊಕದ್ದಮೆಗಳು) ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಾದ ಪುರಸಭೆ, ಪಂಚಾಯತಿ, ವಿದ್ಯುತ್ ಮಂಡಳಿ ಮುಂತಾದ ಸ್ಥಳೀಯ ಸಂಸ್ಥೆಗಳ ಪರ ಮತ್ತು ವಿರುದ್ಧ ದಾಖಲಾದ ಪ್ರಕರಣಗಳು.

ಕಾರ್ಮಿಕ ನಷ್ಟ ಪರಿಹಾರ ಪ್ರಕರಣಗಳು, ಬ್ಯಾಂಕುಗಳಿಗೆ ಸಂಬಂಧಿಸಿದ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ಜೀವನಾಂಶ ಪ್ರಕರಣಗಳನ್ನು ಒಳಗೊಂಡಂತೆ ಕಾನೂನು ಬದ್ಧವಾಗಿ ರಾಜಿ ಸಂಧಾನವಾಗಲು ಅವಕಾಶವಿರುವ ಎಲ್ಲ ಪ್ರಕರಣಗಳನ್ನು ಮೆಗಾ ಲೋಕ ಅದಾಲತ್‍ನಲ್ಲಿ ರಾಜಿ ಸಂಧಾನ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ಈ ಮೆಗಾ ಲೋಕ ಅದಾಲತ್‍ನಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಇಚ್ಚಿಸಿದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿಗಳಿಗೆ ಆನ್‍ಲೈನ್, ವಿಡಿಯೋ ಕಾನ್ಫರನ್ಸ್, ಇ-ಮೇಲ್, ಎಸ್.ಎಂ.ಎಸ್.ಎಸ್., ವಾಟ್ಸಪ್, ಎಲೆಕ್ಟ್ರಾನಿಕ್ ಮೋಡ್ ಅಥವಾ ಖುದ್ದಾಗಿ ಹಾಜರಾಗುವ ಮುಖಾಂತರ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು.

ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಂಬಂಧಪಟ್ಟ ಉಚ್ಚ ನ್ಯಾಯಾಲಯ, ಕಾನೂನು ಸೇವಾ ಸಮಿತಿಯನ್ನು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲೂಕು ಕಾನೂನು ಸೇವಾ ಸಮಿತಿಗಳನ್ನು ಅಥವಾ ಕಾಯಂ ಜನತಾ ನ್ಯಾಯಾಲಯಗಳನ್ನು ಆನ್‍ಲೈನ್, ವಿಡಿಯೋ ಕಾನ್ಫರನ್ಸ್, ಇ-ಮೇಲ್, ಎಸ್.ಎಂ.ಎಸ್., ವಾಟ್ಸಪ್, ಎಲೆಕ್ಟ್ರಾನಿಕ್ ಮೋಡ್ ಅಥವಾ ಖುದ್ದಾಗಿ ಹಾಜರಾಗುವ ಮೂಲಕ ಸಂಪರ್ಕಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿಯೊಂದು ಲೋಕ ಅದಾಲತ್‍ಗೆ ಪ್ರತ್ಯೇಕವಾಗಿ ಒಬ್ಬರು ನ್ಯಾಯಾಧೀಶರು ಹಾಗೂ ನುರಿತ ನ್ಯಾಯವಾದಿಗಳು, ಸಂಧಾನಕಾರರಾಗಿ ಕಾರ್ಯನಿರ್ವಹಿಸುತ್ತಾರೆ. ವ್ಯಾಜ್ಯಗಳು ನ್ಯಾಯಾಲಯಗಳಲ್ಲಿ ವಿಚಾರಣೆಯಾಗಿ ಇತ್ಯರ್ಥವಾದಲ್ಲಿ ಅರ್ಜಿದಾರರ ಪರವಾಗಿ ಅಥವಾ ಎದುರುದಾರರ ಪರವಾಗಿ ಅಂದರೆ ಒಂದು ಕಡೆಯವರ ಪರವಾಗಿ ಮಾತ್ರ ಆದೇಶವಾಗುತ್ತದೆ. ಆದ್ದರಿಂದ ತಮ್ಮ ವಿರುದ್ಧದ ಆದೇಶದ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲು ಅವಕಾಶ ಇರುತ್ತದೆ.

ಆದರೆ ಲೋಕ ಅದಾಲತ್‍ನಲ್ಲಿ ಇತ್ಯರ್ಥವಾದ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಇಲ್ಲಿ ಎರಡೂ ಕಡೆಯ ಪಕ್ಷಗಾರರು ತಮ್ಮ ವ್ಯಾಜ್ಯಗಳಿಗೆ ಸೌಹಾರ್ದಯುತವಾಗಿ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಜೊತೆಗೆ ಅವರ ಅಮೂಲ್ಯವಾದ ಸಮಯ, ಶ್ರಮ ಮತ್ತು ಹಣದ ಉಳಿತಾಯವಾಗುತ್ತದೆ.

ಇದಲ್ಲದೇ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ನ್ಯಾಯಾಲಯದ ಶುಲ್ಕವು ಸಹ ನಿಯಮಾನುಸಾರ ಮರುಪಾವತಿಗೊಳ್ಳುತ್ತದೆ. ಈ ಎಲ್ಲ ಕಾರಣಗಳಿಗಾಗಿ ಈ ಒಂದು ಲೋಕ ಅದಾಲತ್‍ನ ಸದುಪಯೋಗವನ್ನು ಪಕ್ಷಗಾರರು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಅರಿವಿರುವ ಸಾರ್ವಜನಿಕರು ಪಕ್ಷಗಾರರಿಗೆ ತಿಳಿವಳಿಕೆ ನೀಡಲು ತಿಳಿಸಿದ್ದಾರೆ.

ಕಳೆದ ಆಗಸ್ಟ್‌ 14 ರಂದು ಜರುಗಿದ ಮೆಗಾ ಲೋಕ ಅದಾಲತ್‍ನಲ್ಲಿ ಜಿಲ್ಲೆಯಾದ್ಯಂತ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ 5,412 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಮೂಲಕ ಮೆಗಾ ಲೋಕ ಅದಾಲತ್ ಯಶಸ್ವಿಯಾಗಿ ನಡೆಸಲಾಗಿತ್ತು.

Leave a Reply

error: Content is protected !!
LATEST
NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ