ಬೆಂಗಳೂರು: ಸಾರಿಗೆ ಸಚಿವ ಬಿ.ಶ್ರೀರಾಮುಲು ಗುರುವಾರ ಬೆಳಗ್ಗೆ 10:30ರಲ್ಲಿ ಬೆ.ಮ.ಸಾ.ಸಂಸ್ಥೆ ಘಟಕ 37 ಕೆಂಗೇರಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮೊದಲ ವಿದ್ಯುತ್ ಬಸ್ ಅನಾವರಣ ಮಾಡಿದರು.
ಬಳಿಕ ಮಾತನಾಡಿದ ಸಚಿವರು, ಸ್ಮಾರ್ಟ್ ಸಿಟಿ ಯೋಜನೆಯಡಿ ಮೆಟ್ರೋ ಫೀಡರ್ ಸೇವೆಗಾಗಿ 9ಮೀಟರ್ ಹವಾನಿಯಂತ್ರಣ ರಹಿತ 90 ಎಲೆಕ್ಟ್ರಿಕ್ ಬಸ್‌ಗಳನ್ನು “ಒಟ್ಟು ವೆಚ್ಚದ ಒಪ್ಪಂದ” (GCC) ಆಧಾರದಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಸೇವಾ ಪೂರೈಕೆದಾರರ ಆಯ್ಕೆಯನ್ನು “ಟೆಂಡರ್ ಮೂಲಕ ಆಹ್ವಾನಿಸಲಾಗಿತ್ತು.
ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ 90 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗಾಗಿ 50 ಕೋಟಿ ರೂ.ಗಳಷ್ಟು ಹಣಕಾಸಿನ ನೆರವು ನೀಡುತ್ತಿದೆ. ಅಂದರೆ ಪ್ರತಿ ಬಸ್‌ಗೆ 50 ಲಕ್ಷ ರೂ.ಗಳ ಪ್ರೋತ್ಸಾಹಧನ (90 ಬಸ್‌ಗಳಿಗೆ ರೂ.45 ಕೋಟಿ) ಬಿಡ್ಡರ್‌ಗೆ ಒದಗಿಸಲಾಗುವುದು ಮತ್ತು 5 ಕೋಟಿ ರೂ.ಗಳನ್ನು ಚಾರ್ಜಿಂಗ್ ಮೂಲಸೌಕರ್ಯ ಸ್ಥಾಪನೆಗೆ ಬಿಎಂಟಿಸಿ ಬಳಲಿಕೊಳ್ಳಲಿದೆ ಎಂದು ತಿಳಿಸಿದರು.
ಸದ್ಯ ಟೆಂಡರ್ ಅಂತಿಮಗೊಳಿಸಲಾಗಿದ್ದು, GCC ದರದಲ್ಲಿ ರೂ.51.67/km ವಿದ್ಯುತ್ ಯೊಂದಿಗೆ 180 ಆಶ್ವಾಸಿತ ಕಿಲೋಮೀಟರ್‌ಗಳಿಗೆ 10 ವರ್ಷಗಳ ಅವಧಿಗೆ M/s. NTPC ವ್ಯಾಪರ್ ವಿದ್ಯುತ್ ನಿಗಮದವರಿಗೆ ನೀಡಲಾಗಿದೆ. ಈ ಬಸ್ಸುಗಳು 33+D ಆಸನ ಸಾಮರ್ಥ್ಯ ಹೊಂದಿದ್ದು, M/s.JBM (ಒಕ್ಕೂಟ ಪಾಲುದಾರ) ನಿಂದ ಪೂರೈಸಲಾಗುತ್ತದೆ ಎಂದು ವಿವರಿಸಿದರು.
ಇನ್ನು ಈ 90 ಬಸ್‌ಗಳನ್ನು ಡಿಪೋ-8 (ಯಶವಂತಪುರ), ಡಿಪೋ-29 (ಕೆ.ಆರ್. ಪುರಂ) ಮತ್ತು ಡಿಪೋ-37 (ಕೆಂಗೇರಿ) ಗಳಿಂದ ನಿರ್ವಹಣೆ ಮಾಡಲಾಗುತ್ತದೆ. ಒಂದು ಬಾರಿ ಚಾರ್ಜ್‌ಗೆ 120 ಕಿಮೀ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, 45 ನಿಮಿಷಗಳ ಚಾರ್ಜಿಂಗ್ ಮಾಡಿದರೆ ಸಾಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಎನ್. ಎಸ್. ನಂದೀಶ್ ರೆಡ್ಡಿ, ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್ ಹಾಗೂ ಮಂಡಳಿ ನಿರ್ದೇಶಕರು ಇದ್ದರು.