ನ್ಯೂಡೆಲ್ಲಿ: ದೇಶದ ಸುರಕ್ಷತೆ ತಮ್ಮ ಮೊದಲ ಆದ್ಯತೆ ಎಂದು ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಹೇಳಿದ್ದಾರೆ.
ವಾಯುಪಡೆಯ ಶಕ್ತಿಯನ್ನು ಸರಿಯಾಗಿ ಮತ್ತು ಸೂಕ್ತ ಸಮಯಕ್ಕೆ ಸದ್ಬಳಕೆ ಮಾಡಿಕೊಂಡು ದೇಶದ ಸುರಕ್ಷತೆ ತಮ್ಮ ಮೊದಲ ಆದ್ಯತೆಯಾದರೆ, ಭವಿಷ್ಯದಲ್ಲಿ ಯುದ್ಧಗಳಲ್ಲಿ ಸವಾಲುಗಳನ್ನು ಎದುರಿಸಲು ನಮ್ಮ ಸಿಬ್ಬಂದಿಗೆ ತರಬೇತಿ, ಉತ್ತೇಜನ ಮತ್ತು ಎಲ್ಲ ತಂತ್ರಜ್ಞಾನ, ಸಾಧನಗಳನ್ನು ಬಳಸುವುದು ಎರಡನೇ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.
ಮುಂದೆ, ಎಲ್ಲ ರೀತಿಯಲ್ಲೂ ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡುವ ‘ಆತ್ಮನಿರ್ಭರ’ದ ಕಡೆಗೆ ದೈತ್ಯ ಹೆಜ್ಜೆಗಳನ್ನು ಇಡುವುದು ಮುಂದಿನ ಆದ್ಯತೆಯಾಗಿದೆ ಎಂದು ಕೂಡ ಹೇಳಿದ್ದಾರೆ.
ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಬದೌರಿಯಾ ಅವರು ನಿವೃತ್ತಿಯಾದ ಹಿನ್ನೆಲೆಯಲ್ಲಿ ನಿನ್ನೆ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಅಧಿಕಾರ ವಹಿಸಿಕೊಂಡಿದ್ದಾರೆ.
ವಾಯುಪಡೆಯ ಯೋಧರಲ್ಲಿ ಸಾಕಷ್ಟು ಸಾಮರ್ಥ್ಯವಿದೆ, ಭವಿಷ್ಯದ ಯುದ್ಧಗಳಿಗೆ ತಯಾರಾಗಲು ನಾವು ಇನ್ನಷ್ಟು ಕಲಿಯುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಗಡಿಗಳಲ್ಲಿ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಐಎಎಫ್ ಪಾತ್ರದ ಬಗ್ಗೆ ಮತ್ತು ಅದು ಹೇಗೆ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದು ಅವರು ವಿವರಿಸಿದರು.
ಸರಿಯಾದ ತರಬೇತಿ, ಈಗಿರುವ ಪರಿಕರಗಳ ಪರಿಶೋಧನೆ ಮತ್ತು ಭವಿಷ್ಯದಲ್ಲಿ ನಾವು ಏನನ್ನು ಪಡೆಯುತ್ತೇವೆ ಅವುಗಳ ಸರಿಯಾದ ಸದ್ಭಳಕೆ ಮತ್ತು ಮಾನವ ಶಕ್ತಿಗಳ ಬಳಕೆಯನ್ನು ಮಾಡಬೇಕಾಗುತ್ತದೆ ಎಂದಿದ್ದಾರೆ.
ಮೇಲ್ಮೈಯಿಂದ ವಾಯು ಮಾರ್ಗದರ್ಶಿ ಶಸ್ತ್ರಾಸ್ತ್ರಗಳು ಮತ್ತು ಸಂಪೂರ್ಣ ಇತರ ಉಪಕರಣಗಳು ಬಳಕೆ ಹಂತದಲ್ಲಿವೆ. ನಮ್ಮ ಎಲ್ಲ ಖರೀದಿ ಯೋಜನೆಗಳಲ್ಲಿ ‘ಆತ್ಮನಿರ್ಭರ’ದ ಕಡೆಗೆ ನಮ್ಮ ಗಮನ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.
ನಾವು ಮುಂದುವರಿದುಕೊಂಡು ಹೋಗುತ್ತಿರುವ ಹಾದಿ ಎಲ್ಲರಿಗೂ ಗೊತ್ತಿದೆ. ನಾವು 83 ಹಗುರ ಯುದ್ಧ ವಿಮಾನಗಳಿಗಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಎಎಂಸಿಎ ಮತ್ತು ಎಲ್ ಸಿಎ-ಎಂಕೆ2 ಸೇರ್ಪಡೆ ಹಂತದಲ್ಲಿವೆ ಎಂದು ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಹೇಳಿದ್ದಾರೆ.