ಬೆಂಗಳೂರು: ಸಾರಿಗೆ ನಾಲ್ಕೂ ನಿಗಮಗಳು ಆಗಸ್ಟ್ ತಿಂಗಳ ವೇತನದಲ್ಲಿ ಅರ್ಧ ವೇತನವನ್ನು ನೀಡಿದ್ದು ಉಳಿದರ್ಧ ವೇತನವನ್ನು ಇನ್ನೂ ಬಿಡುಗಡೆ ಮಾಡಿಲ್ಲ.
ಹೌದು ಕಳೆದ ಜುಲೈನಲ್ಲಿ ವೇತನ ನೀಡದಿದ್ದರಿಂದ ನೌಕರರು ವರಮಹಾಲಕ್ಷ್ಮೀ ಹಬ್ಬ ಆಚರಣೆಗೆ ತೊಂದರೆ ಅನುಭವಿಸಬೇಕಾಯಿತು. ನಂತರ ಸಚಿವರು ಗಣೇಶ ಹಬ್ಬಕ್ಕೂ ಮುನ್ನ ಜುಲೈ ಮತ್ತು ಆಗಸ್ಟ್ ಈ ಎರಡೂ ತಿಂಗಳುಗಳ ವೇತನವನ್ನು ಒಟ್ಟಿಗೆ ಹಾಕುತ್ತೇವೆ ಎಂದು ಹೇಳಿದರು.
ಆದರೆ ಆಗಸ್ಟ್ ಕೊನೆಯಲ್ಲಿ ಜುಲೈ ತಿಂಗಳ ವೇತನ ನೀಡಿದರು. ನಂತರ ಆಗಸ್ಟ್ ತಿಂಗಳ ವೇತನದಲ್ಲಿ ಅರ್ಧ ವೇತನವನ್ನು ಗಣೇಶ ಹಬ್ಬಕ್ಕೂ ಮುನ್ನ ನೌಕರರ ಬ್ಯಾಂಕ್ ಖಾತೆಗಳಿಗೆ ಹಾಕಿದ್ದರು. ಆ ಬಳಿಕ ಅಂದರೆ ಅಕ್ಟೋಬರ್ ಮೊದಲ ವಾರ ಪ್ರಾರಂಭವಾಗಿದ್ದರೂ ಈವರೆಗೂ ಉಳಿದರ್ಧ ವೇತನ ಬಿಡುಗಡೆ ಮಾಡೇ ಇಲ್ಲ.
ಹೀಗಾಗಿ ಮತ್ತೆ ನೌಕರರು ವೇತನ ಬರದಿರುವುದರಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಬಂಧಪಟ್ಟ ಸಚಿವರು ವೇತನ ಬಿಡುಗಡೆ ಮಾಡುವತ್ತ ಗಮನ ಹರಿಸಬೇಕಿದೆ.
ಇನ್ನು ಈ ಸಂಬಂಧ ಸಾರಿಗೆ ಅಧಿಕಾರಿಯೊಬ್ಬರು ಮಾತನಾಡಿ, ಅಧಿವೇಶನದ ವೇಳೆ ಸಚಿವರು ಮತ್ತು ಮುಖ್ಯಮಂತ್ರಿಗಳು ಬಿಸಿಯಾಗಿದ್ದರಿಂದ ನಮ್ಮ ವೇತನದ ಬಗ್ಗೆ ಇನ್ನು ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಅಧಿವೇಶನ ಮುಗಿದಿದ್ದು, ಇನ್ನು ವೇತನ ಬಿಡುಗಡೆಯಾಗುವ ನಿರೀಕ್ಷೆಯಲ್ಲಿ ನಾವು ಇದ್ದೇವೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ ಮುಗಿದು ಅಕ್ಟೋಬರ್ ತಿಂಗಳು ಬಂದರೂ ಆಗಸ್ಟ್ ತಿಂಗಳ ವೇತನವೇ ಬಿಡುಗಡೆಯಾಗಿಲ್ಲ, ಇನ್ನು ಸೆಪ್ಟೆಂಬರ್ ತಿಂಗಳ ವೇತನ ಯಾವಾಗ ಬಿಡುಗಡೆಯಾಗುವುದು ಎಂದು ನೌಕರರು ಸಚಿವರು ಮತ್ತು ಸರ್ಕಾರದತ್ತ ಮುಖಮಾಡಿದ್ದಾರೆ.