ನ್ಯೂಡೆಲ್ಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ. ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳಿಗೆ ಬದ್ಧ ನಾಗಿರುವೆ ಎಂದು ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ಗುರುವಾರ ದೆಹಲಿಗೆ ತೆರಳಿದ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ಪಂಜಾಬ್ ಉಸ್ತುವಾರಿ ಹರೀಶ್ ರಾವತ್ ಅವರನ್ನು ಭೇಟಿಮಾಡಿ ಸುಮಾರು ಒಂದು ಗಂಟೆ ಚರ್ಚೆ ನಡೆಸಿದರು.
ವರಿಷ್ಠರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಧು, ನನ್ನ ಕಳಕಳಿ ಏನೆಂಬುದನ್ನು ಈಗಾಗಲೇ ಹೈಕಮಾಂಡ್‌ಗೆ ತಿಳಿಸಿದ್ದೇನೆ. ಅಧ್ಯಕ್ಷರು ತೆಗೆದುಕೊಳ್ಳುವ ನಿರ್ಧಾರಗಳು ಪಕ್ಷದ ಮತ್ತು ಪಂಜಾಬ್‌ನ ಹಿತಾಸಕ್ತಿಗೆ ಪೂರಕವಾಗಿರಲಿವೆ ಎಂಬ ಭರವಸೆ ಇದೆ. ನಾಯಕತ್ವದ ಮೇಲೆ ನನಗೆ ಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಪಂಜಾಬ್ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತೆ, ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿ ಇನ್ನಷ್ಟು ಬಲಪಡಿಸುವಂತೆ ಸಿಧು ಅವರಿಗೆ ಸೂಚಿಸಲಾಗಿದೆ ಎಂದು ಹರೀಶ್ ರಾವತ್ ಹೇಳಿದ್ದಾರೆ.
ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್‌ನ ನೂತನ ಮುಖ್ಯ ಮಂತ್ರಿಯಾಗಿ ನೇಮಕಮಾಡಿದ ಬಳಿಕ ಪಕ್ಷದ ನಿರ್ಧಾರಗಳ ವಿರುದ್ಧ ಬಂಡಾಯವೆದ್ದಿದ್ದ ಸಿಧು ಇತ್ತೀಚೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅದನ್ನು ಹೈಕಮಾಂಡ್ ಅಂಗೀಕರಿಸಿರಲಿಲ್ಲ.