ಬೆಂಗಳೂರು: ಕಳೆದ ಏಪ್ರಿಲ್ನಲ್ಲಿ ನಡೆದಂತಹ ಸಾರಿಗೆ ಮುಷ್ಕರದ ಅವಧಿಯಲ್ಲಿ ಬಹಳಷ್ಟು ಸಾರಿಗೆ ನೌಕರರ ವಿರುದ್ಧ ವಜಾ, ವರ್ಗಾವಣೆ, ಅಮಾನತು ಹಾಗೂ ಪೊಲೀಸ್ ಪ್ರಕರಣಗಳನ್ನು ಕಾನೂನು ಬಾಹಿರವಾಗಿ ದಾಖಲಿಸಲಾಗಿದ್ದು, ಈ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯುಂತೆ ಆಗ್ರಹಿಸಿ ಇದೆ ಅಕ್ಟೋಬರ್ 21ರಿಂದ ಮತ್ತೆ ಮುಷ್ಕರಕ್ಕೆ ಸಾರಿಗೆ ನೌಕರರ ಪರವಾದ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟ ( ಬಿಎಂಎಸ್) ಕರೆ ನೀಡಿದೆ.
ಈ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯು ನೌಕರರು ಅ.21ರಂದು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಒಂದು ವೇಳೆ ಹಾಜರಾಗದಿದ್ದರೆ ಗೈರು ಹಾಜರಿಯೆಂದು ತೋರಿಸಬೇಕಾಗುತ್ತಿದೆ. ಜತೆಗೆ ಶಿಸ್ತು ಕ್ರಮವನ್ನೂ ಕೂಡ ಜರುಗಿಸಬೇಕಾಗುತ್ತಿದೆ ಎಂದು ನೌಕರರಿಗೆ ಎಚ್ಚರಿಕೆ ನೀಡಿದೆ.
ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ಸಕಾಲದಲ್ಲಿ ವೇತನ ಪಾವತಿ, ವೇತನ ಪರಿಷ್ಕರಣೆ ಮುಷ್ಕರದ ಸಮಯದಲ್ಲಿ ಕಾನೂನು ಬಾಹಿರವಾಗಿ ತೆಗೆದುಕೊಂಡಿರುವ ಶಿಸ್ತುಕ್ರಮಗಳನ್ನು ಹಿಂಪಡೆಯಬೇಕು.
ಎರಡು ಹಂತದ ಆಡಳಿತ ವ್ಯವಸ್ಥೆ, ಏಕರೂಪ ಶಿಸ್ತು ಕ್ರಮ, ನಿವೃತ್ತಿ, ಸ್ವಯಂ ನಿವೃತ್ತಿ ನೌಕರರ ಬಾಕಿ ಹಣ ಪಾವತಿ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಬಿಎಂಎಸ್ ಸಂಘಟನೆ ಬೆಂಗಳೂರು ಮೌರ್ಯವೃತ್ತದಲ್ಲಿ ಅ.21ರಂದು ಬೆಳಗ್ಗೆ 11.30ಕ್ಕೆ ಪ್ರತಿಭಟನಾ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಭಾಗವಹಿಸುವಂತೆ ಸಂಘದ ಅಧ್ಯಕ್ಷ ಪೂಂಜ
ಮನವಿ ಮಾಡಿದ್ದಾರೆ.
ಇದಿಷ್ಟೇ ಅಲ್ಲದೆ ಮತ್ತೆ ಪ್ರತಿಭಟನಾ ಧರಣಿಗೆ ನೌಕರರ ಪರವಾದ ಹಲವು ಸಂಘಟಕನೆಗಳು ಮುಂದಾಗುತ್ತಿರುವುದಕ್ಕೆ ಬೆಚ್ಚಿಬಿದ್ದಿರುವ ಕೆಲ ಸಾರಿಗೆ ಅಧಿಕಾರಿಗಳು ಮತ್ತೆ ನೌಕರರನ್ನು ಕಾನೂನು ಬಾಹಿರವಾಗಿ ನಡೆಸಿಕೊಳ್ಳುವ ದುರಾಲೋಚನೆಯಲ್ಲಿ ತೊಡಗುತ್ತಿದ್ದಾರೆ.
ಈ ರೀತಿ ಸಾರಿಗೆ ಸಂಸ್ಥೆಯ ಆಡಳಿತ ವರ್ಗ ನೌಕರರ ವಿರುದ್ಧ ವಾಮಮಾರ್ಗವನ್ನು ಅನುಸರಿಸುವ ಬದಲಿಗೆ ಅವರ ಕಾನೂನಾತ್ಮಕ ಬೇಡಿಕೆಗಳನ್ನು ಈಡೇರಿಸಬಹುದಲ್ಲ. ಅದನ್ನು ಮಾಡುವ ಬದಲು ಪ್ರತಿಭಟನೆಯಲ್ಲಿ ಭಾಗವಹಿಸಬೇಡಿ ಎಂದು ಇನ್ಡೈರೆಕ್ಟ್ ಆಗಿ ಹೇಳುವುದೇನಿದೆ.
ದೇಶದ ಪ್ರತಿಯೊಬ್ಬ ಪ್ರಜೆ, ನೌಕರನಿಗೂ ಆತನ ಮೂಲ ಭೂತ ಸೌಲಭ್ಯಗಳನ್ನು ಪಡೆಯುವ ಹಕ್ಕಿದೆ. ಅಂಥ ಹಕ್ಕನ್ನೇ ಸಾರಿಗೆ ಸಂಸ್ಥೆಯು ಮೊಟಕುಗೊಳಿಸಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದೆ ಅದಡ್ಡೆಯಿಂದ ವರ್ತಿಸುತ್ತಿದೆ.
ಇದರಿಂದ ಬೇಸಗೊಂಡಿರುವ ಸಂಘಟನೆಗಳು ನೌಕರರ ಬೇಡಿಕೆ ಈಡೇರಿಕೆಗಾಗಿ ಪ್ರತ್ಯಕ್ಷವಾಗಿ ಇಲ್ಲ ಪರೋಕ್ಷವಾಗಿ ಒಗ್ಗಟ್ಟು ಪ್ರದರ್ಶಿಸಲು ಮುಂದಾಗುತ್ತಿವೆ. ಆ ಒಗ್ಗಟ್ಟನ್ನು ಮತ್ತೆ ಮುರಿಯಲು ನಿಗಮಗಳ ಕೆಲ ಅಧಿಕಾರಿಗಳು ವಾಮಮಾರ್ಗ ಅನುಸರಿಸಲು ಮುಂದಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ, ಅಧಿಕಾರಿಗಳ ಈ ಎಲ್ಲ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ನೌಕರರ ಪರ ಸಂಘಟನೆಗಳು ಈಗ ಒಳಗೊಳಗೆ ಬಲಗೊಳ್ಳುತ್ತಿದ್ದು, ಸತಾಯಗತಾಯ ನೌಕರರಿಗೆ ಒಳ್ಳೆಯದನ್ನು ಮಾಡಲೇ ಬೇಕು ಎಂಬ ನಿರ್ಧಾರಕ್ಕೆ ಬಂದಿವೆ. ಅಷ್ಟೇ ಅಲ್ಲ ಸಂಘಟನೆಗಳಿಗೆ ಹಾಲಿ ಸರ್ಕಾರದಲ್ಲಿರುವ ಕೆಲ ಸಚಿವರು ಮತ್ತು ಶಾಸಕರು ಬಾಹ್ಯ ಬೆಂಬಲವನ್ನು ನೀಡತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಸಾರಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ಸ್ವತಃ ಕಣ್ಣಾರವೇ ನೋಡುತ್ತಿರುವ ಕೆಲ ಸಚಿವರ ಮತ್ತು ಹಲವು ಶಾಸಕರು ಅವರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಅಡ್ಡಗಾಲು ಹಾಕುತ್ತಿರುವ ಅಧಿಕಾರಿಗಳಿಗೆ ಅವರ ಮಾರ್ಗದಲ್ಲೇ ಹೋಗಿ ಬುದ್ಧಿಕಲಿಸಲು ಮುಂದಾಗುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಈ ಎಲ್ಲವನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಮತ್ತೊಂದು ಸಾರಿಗೆ ನೌಕರರ ದಂಗೆ, ಅಥವಾ ಹೋರಾಟ ಅಥವಾ ದೇಶವೇ ಕಂಡು ಕೇಳಿರದಂತ ಹೋರಾಟ ನಡೆಯುವ ಕಾಲ ಬಹಳ ದೂರವೇನು ಇಲ್ಲ ಎಂದು ಇದೇ ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಅಧಿಕಾರಿಗಳ ಕಿರುಕುಳದಿಂದ ಮಾನಸಿಕವಾಗಿ ಈಗಾಗಲೇ ಬಹಳಷ್ಟು ನೊಂದಿರುವ ನೌಕರರು ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದು, ಅಧಿಕಾರಿಗಳು ಹೀಗೆ ತಮ್ಮ ಮೊಂಡುತನವನ್ನು ಪ್ರದರ್ಶಿಸುತ್ತಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಹೆಗಲುಕೊಡಬೇಕಾಗುತ್ತಿದೆ.
ಹೀಗಾಗಿ ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ಕಾರ ಮತ್ತು ಸಂಸ್ಥೆಯ ಮಾನವನ್ನು ಉಳಿಸುವ ನಿಟ್ಟಿನಲ್ಲಿ ಯೋಚಿಸಬೇಕು. ಈ ಬಗ್ಗೆ ಸರ್ಕಾರವೂ ಕೂಡ ತನ್ನ ಉದಾಸೀನ ಭಾವನೆಯನ್ನು ಬಿಟ್ಟು ನೌಕರರ ಸಮಸ್ಯೆಗೆ ಮತ್ತು ಬೇಡಿಕೆಗಳಿಗೆ ಸ್ಪಂದಿಸಬೇಕಿದೆ.