ಬೆಂಗಳೂರು: ಸಾರಿಗೆ ಬಸ್ ಗಳಲ್ಲಿ ಮಕ್ಕಳಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ನಡೆಯುವ ವಾದ ವಿವಾದಗಳಿಗೆ ಸಾರಿಗೆ ಸಂಸ್ಥೆ ಇತಿಶ್ರೀ ಹೇಳಲು ನಿರ್ಧರಿಸಿದೆ.
ಸಾರಿಗೆ ಬಸ್‌ಗಳಲ್ಲಿ ಮಕ್ಕಳು ಪ್ರಯಾಣ ಮಾಡುವ ಸಂದರ್ಭದಲ್ಲಿ ಪ್ರಯಾಣದರದ ವಿಚಾರವಾಗಿ ಹಿಂದಿನಿಂದಲೂ ರಂಪಾಟ ನಡೆಯುತ್ತಲೇ ಇರುತ್ತದೆ.
ಬಹುತೇಕ ಪ್ರಯಾಣಿಕರು ಟಿಕೆಟ್ ಪಡೆಯುವ ಸಂದರ್ಭದಲ್ಲಿ ಮಕ್ಕಳ ವಯಸ್ಸು ಮತ್ತು ಅವರು ಅಭ್ಯಾಸ ಮಾಡುತ್ತಿರುವ ತರಗತಿಯನ್ನು ಹೇಳಿ ಚೀಟಿ ಪಡೆಯುತ್ತಿದ್ದರು. ಆದರೆ ನಿರ್ವಾಹಕರಿಗೆ ವಯಸ್ಸಿನ ಅಂತರ ಕಂಡುಹಿಡಿಯಲು ಕಷ್ಟವಾಗುತ್ತಿತ್ತು.
ಇದೀಗ ಇದಕ್ಕಾಗಿ ಸಾರಿಗೆ ಸಂಸ್ಥೆ ಹೊಸ ಆದೇಶವನ್ನು ಹೊರಡಿಸಿದ್ದು, ನಿರ್ವಾಹಕರು ಮಕ್ಕಳಿಗೆ ಪ್ರಯಾಣದರ ವಿಧಿಸುವಾಗ ವಯಸ್ಸಿನ ಜೊತೆಗೆ ಎತ್ತರವನ್ನು ಅಳತೆಗೋಲಾಗಿ ಇಟ್ಟುಕೊಂಡು, ಕರಾರಸಾ ನಿಗಮದ ಸಾರಿಗೆಗಳಲ್ಲಿ ಮಕ್ಕಳಿಗೆ ಆರು ವರ್ಷಗಳವರೆಗೆ ಉಚಿತವಾಗಿ ಪ್ರಯಾಣಿಸಲು ಹಾಗೂ ಆರು ವರ್ಷದಿಂದ ಮೇಲ್ಪಟ್ಟು 12 ವರ್ಷಗಳವರೆಗೆ ಅರ್ಧ ಟಿಕೆಟು ಪಡೆದು ಪ್ರಯಾಣಿಸಲು ಅನುಮತಿ ನೀಡಲಾಗಿದೆ.
ಆದರೆ ಮಕ್ಕಳಿಗೆ ಟಿಕೇಟು ಪಡೆಯುವಾಗ ಮಕ್ಕಳ ಪಾಲಕ / ಪೋಷಕರಿಗೆ ಹಾಗೂ ನಿರ್ವಾಹಕರ ಮಧ್ಯೆ ವಾದ ವಿವಾದಗಳಿಗೆ ಎಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಪ್ರಯಾಣದರ ವಿಧಿಸುವಾಗ ವಯಸ್ಸಿನ ಜೊತೆಗೆ ಎತ್ತರವನ್ನು ಅಳತೆಗೋಲಾಗಿ ಇಟ್ಟುಕೊಳ್ಳುವಂತೆ ಅ-16 ರಂದು ಹೊರಡಿಸಿರುವ ಸಾಮಾನ್ಯ ಸ್ಥಾಯೀ ಆದೇಶದಲ್ಲಿ ತಿಳಿಸಲಾಗಿದೆ.
ಅದರಂತೆ, ನಿಗಮದ ವಾಹನಗಳಲ್ಲಿ ಎತ್ತರವನ್ನು ಗುರುತಿಸಲಾಗಿರುತ್ತದೆ. ಆದರೆ, ಅಳತೆಗೋಲನ್ನು ಎಲ್ಲಾ ಮಕ್ಕಳಿಗೂ ಸರ್ವೆ ಸಾಮಾನ್ಯವಾಗಿ ಉಪಯೋಗಿಸುತ್ತಿರುವುದಾಗಿ ಹಲವಾರು ದೂರುಗಳು / ವರದಿಗಳು ಬರುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಸ್ಪಷ್ಟನೆಯನ್ನು ನೀಡಲಾಗಿದೆ.
• ಮಕ್ಕಳ ವಯಸ್ಸಿನ ಬಗ್ಗೆ ಅಧಿಕೃತ ದಾಖಲಾತಿಗಳನ್ನು ತೋರಿಸಿದಾಗ ಅಳತೆಗೋಲನ್ನು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ.
• ನಿರ್ವಾಹಕರಿಗೆ ಮಕ್ಕಳ ವಯಸ್ಸಿನ ಬಗ್ಗೆ ಖಚಿತವಾಗಿ ಖಾತ್ರಿಯಾದಲ್ಲಿ ಅಳತೆಗೋಲನ್ನು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ.
• ಮಕ್ಕಳಿಗೆ ಟಿಕೇಟು ಪಡೆಯುವಾಗ ಮಕ್ಕಳ ಪಾಲಕ / ಪೋಷಕರಿಗೆ ಹಾಗೂ ನಿರ್ವಾಹಕರ ಮಧ್ಯೆ ಭಿನ್ನಾಭಿಪ್ರಾಯವಿದ್ದಲ್ಲಿ ಅಳತೆಗೋಲನ್ನು ಉಪಯೋಗಿಸುವುದು.
• ಸರ್ವೆ ಸಾಮಾನ್ಯವಾಗಿ ಎಲ್ಲಾ ಮಕ್ಕಳಿಗೆ ಅಳತೆಗೋಲನ್ನು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ. ಎಂದು ಅ-16 ರಂದು ಹೊರಡಿಸಿರುವ ಆದೇಶದಲ್ಲಿ ಸೂಚಿಸಲಾಗಿದೆ.
ಅಳತೆಗೋಲು ಇಲ್ಲ : ಸಾರಿಗೆ ನಿಗಮದ ಬಸ್ ಗಳಲ್ಲಿ ಮಕ್ಕಳ ವಯಸ್ಸು ನಿರ್ಧರಿಸುವ ಅಳತೆಗೋಲು ಬಹುತೇಕ ವಾಹನಗಳಲ್ಲಿ ನಿಗಮ ಅಳವಡಿಸಿಲ್ಲ, ಮೊದಲು ಎಲ್ಲಾ ವಾಹನಗಳಿಗೆ ಅಳತೆಗೋಲು ಅಳವಡಿಸಿ ನಂತರ ಆದೇಶ ಹೊರಡಿಸಲಿ ಎಂಬುದು ಬಹುತೇಕ ನಿರ್ವಾಹಕರ ಆಗ್ರಹ ವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವರೇ ಎಂಬುದನ್ನು ಕಾದು ನೋಡಬೇಕಿದೆ.