ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ಚಿಕ್ಕಬಳ್ಳಾಪುರ ವಿಭಾಗದ ಚಿಂತಾಮಣಿ ಘಟಕದ ನೌಕರ ತಿಮ್ಮಪ್ಪ ಕರ್ತವ್ಯದಲ್ಲಿ ಇದ್ದ ವೇಳೆ ಹಲ್ಲೆಮಾಡಿದಲ್ಲದೇ, ಜಾತಿನಿಂದನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸಾರಿಗೆ ನೌಕರರು ಒತ್ತಾಯಿಸಿದ್ದಾರೆ.
ಚಿಂತಾಮಣಿ ಘಟಕದ ಮಾರ್ಗ ಸಂಖ್ಯೆ 121/122 ಚಿಂತಾಮಣಿಯಿಂದ ಜೂಲಪಾಳ್ಯ ಕಡೆಗೆ ಹೊಗುತ್ತಿದ್ದ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿ ತನ್ನಪಾಸಿನಲ್ಲಿದ್ದ ಮಾರ್ಗದಲ್ಲಿ ಪ್ರಯಾಣ ಮಾಡದೆ ಬದಲಿ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದ್ದುದ್ದನ್ನು ಗಮನಿಸಿದ ನಿರ್ವಾಹಕ ತಿಮ್ಮಪ್ಪ ನಾಯಕ ಈ ಪಾಸು ಈ ಮಾರ್ಗದಲ್ಲಿ ಅನುಮತಿ ಇಲ್ಲ ನೀವು ಟಿಕೆಟ್ ಪಡೆದು ಪ್ರಯಾಣ ಮಾಡಿ ಎಂದು ತಿಳಿಸಿದ್ದರು.
ಅಷ್ಟಕ್ಕೇ ಆ ವಿದ್ಯಾರ್ಥಿ ತನ್ನ ಸಂಬಂಧಿಕರನ್ನು ದೂರವಾಣಿ ಕರೆ ಮಾಡಿ ಕರೆಸಿಕೊಂಡು ಶಿಡ್ಲಘಟ್ಟ ತಾಲೂಕಿನ ತುರುಕಾಚೇನಹಳ್ಳಿಯ ಬಳಿ ಬಂದ ಆ ಯುವಕರು ನಿರ್ವಾಹಕರನ್ನು ಇಗ್ಗಾಮುಗ್ಗಾ ತಳಿಸಿದ್ದರು. ಇದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದು ಕೆಳಕ್ಕೆ ಬಿದ್ದಾರೆ.
ಬಳಿಕ ನಿರ್ವಾಹಕ ತಿಮ್ಮಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಪ್ರಾಣಾಪಾಯದಿಂದ ಪರಾಗಿದ್ದಾರೆ.
ಇನ್ನು ಹಲ್ಲೆ ಸಂಬಂಧ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ಕು ಜನರ ವಿರುದ್ಧ ದೂರು ನೀಡಿದ್ದು, ಹಲ್ಲೆ, ಜಾತಿನಿಂದನೆ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಹುಡುಕಾಟ ನಡೆಸುತ್ತಿದ್ದಾರೆ. ಪೊಲೀಸರು ಹಲ್ಲೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ ಶಿಕ್ಷೆಗೊಳಪಡಿಸುವ ಮೂಲಕ ತಿಮ್ಮಪ್ಪ ಅವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಸಾರಿಗೆಯ ಎಲ್ಲ ನೌಕರರು ಮನವಿ ಮಾಡಿದ್ದಾರೆ.