ಬೆಂಗಳೂರು: ದೇಶ ಕಂಡ ಶ್ರೇಷ್ಠ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯು ರಾಜಕೀಯಗೊಂಡಿರುವುದು ಖಂಡನೀಯ ಎಂದು ಆಮ್ ಆದ್ಮಿ ಪಾರ್ಟಿ ಬೇಸರ ವಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಕನ್ನಡ ಸಾರಸ್ವತ ಲೋಕಕ್ಕೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಪರಿಷತ್ ದಿಗ್ಗಜ ಸಂಸ್ಥೆಯಾಗಿದೆ. ಸಾಹಿತಿಗಳನ್ನು ಪ್ರೋತ್ಸಾಹಿಸಲು, ಸಾಹಿತ್ಯವನ್ನು ಹೆಚ್ಚುಹೆಚ್ಚು ಓದುಗರಿಗೆ ತಲುಪಿಸಲು ಇದು ಬಳಕೆಯಾಗುತ್ತಿತ್ತು.
ಆದರೆ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪಕ್ಷಗಳ ಚೇಲಾಗಳು, ನಿವೃತ್ತ ಅಧಿಕಾರಿಗಳು, ಭ್ರಷ್ಟಾಚಾರ ಆರೋಪ ಹೊತ್ತಿರುವವರು ಪರಿಷತ್ತಿನ ಚುನಾವಣೆಯ ಸ್ಪರ್ಧಿಸಿ, ಜಯಗಳಿಸುತ್ತಿರುವುದರಿಂದ ಐತಿಹಾಸಿಕ ಸಂಸ್ಥೆಯ ಘನತೆ ಹಾಳಾಗುತ್ತಿದೆ. ರಾಜಕೀಯ ಪಕ್ಷಗಳು ನೇರ ಹಾಗೂ ಪರೋಕ್ಷವಾಗಿ ಚುನಾವಣೆಯಲ್ಲಿ ಮೂಗು ತೂರಿಸುತ್ತಿರುವುದು ವಿಷಾದದ ಸಂಗತಿ ಎಂದು ಹೇಳಿದ್ದಾರೆ.
ಅನೇಕ ಸಾಹಿತಿಗಳು ಆಮ್ ಆದ್ಮಿ ಪಾರ್ಟಿಯೊಂದಿಗೆ ಕಸಾಪ ಚುನಾವಣೆ ಕುರಿತು ಮಾತನಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ಅಕ್ರಮ ತಾಂಡವಾಡುತ್ತಿರುವುದು ಹಿರಿಯ ಹಾಗೂ ಪ್ರಾಮಾಣಿಕ ಸಾಹಿತಿಗಳಲ್ಲಿ ಅತೀವ ನೋವು ಉಂಟುಮಾಡಿದೆ ಎಂದು ಹೇಳಿದ್ದಾರೆ.
ಚುನಾವಣೆಗೆ ಸ್ಪರ್ಧಿಸಿರುವ ಹಣವಂತರು ಸೂಟ್‌ಕೇಸ್, ಬೆಳ್ಳಿ ಬಟ್ಟಲು, ಉಂಗುರ ಮುಂತಾದ ಬೆಲೆಬಾಳುವ ವಸ್ತುಗಳನ್ನು ನೀಡಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. ಈ ರೀತಿ ಚುನಾವಣೆಯನ್ನು ಗೆದ್ದವರಿಂದ ಕನ್ನಡದ ಸೇವೆಯನ್ನು ಹೇಗೆ ತಾನೇ ನಿರೀಕ್ಷಿಸಲು ಸಾಧ್ಯ ಎಂದು ದರ್ಶನ್ ಜೈನ್ ಪ್ರಶ್ನಿಸಿದ್ದಾರೆ.