ನ್ಯೂಡೆಲ್ಲಿ: ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಹಾಕಿಕೊಂಡಿರುವ ಟೆಂಟ್‌ಗಳನ್ನು ತೆರವುಗೊಳಿಸುವುದರ ವಿರುದ್ಧ ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ನಾಯಕ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.
ಎಎನ್ಐ ನೊಂದಿಗೆ ಮಾತನಾಡಿರುವ ಅವರು, ಸ್ಥಳೀಯ ಆಡಳಿತ ಟೆಂಟ್‌ಗಳನ್ನು ತೆರವುಗೊಳಿಸಿದರೆ ರೈತರು ಪೊಲೀಸ್ ಠಾಣೆ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗಳಲ್ಲಿಯೇ ಟೆಂಟ್‌ಗಳನ್ನು ಹಾಕಿಕೊಳ್ಳುತ್ತಾರೆ ಎಂದು ಎಚ್ಚರಿಸಿದರು.
ಜೆಸಿಬಿಗಳ ಸಹಾಯದಿಂದ ಟೆಂಟ್‌ಗಳನ್ನು ಆಡಳಿತ ತೆರವುಗೊಳಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಒಂದು ವೇಳೆ ಅವರು ಅದನ್ನು ಮುಂದುವರಿಸಿದಲ್ಲಿ, ರೈತರು ಪೊಲೀಸ್ ಠಾಣೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗಳಲ್ಲೇ ಟೆಂಟ್‌ಗಳನ್ನು ಹಾಕಿಕೊಳ್ಳಲಿದ್ದಾರೆ ಎಂದು ಆಡಳಿತದ ವಿರುದ್ಧ ಆಕೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಟಿಕಾಯತ್ ಒತ್ತಾಯ ಪೂರ್ವಕವಾಗಿ ಟೆಂಟ್‌ಗಳನ್ನು ತೆರವುಗೊಳಿಸಲು ಯತ್ನಿಸಿದರೆ ದೇಶಾದ್ಯಂತ ರೈತರು ಸರ್ಕಾರಿ ಕಚೇರಿಗಳನ್ನು ಗಲ್ಲಾ ಮಂಡಿಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲಿದ್ದಾರೆ ಎಂದು ಬರೆದಿದ್ದರು.
ದೆಹಲಿ ಪೊಲೀಸರು ಗುರುವಾರ ರಾತ್ರಿಯಿಂದ ಟಿಕ್ರಿ ಹಾಗೂ ಘಾಜಿಪುರ್ ಗಡಿಗಳಲ್ಲಿ ರೈತರ ಟೆಂಟ್‌ಗಳನ್ನು ತೆರವುಗೊಳಿಸುತ್ತಿದ್ದಾರೆ.