ಬೆಂಗಳೂರು: ಅಧಿಕಾರದ ಮದದಲ್ಲಿ ಜನವಿರೋಧಿ ಆಡಳಿತ ನೀಡುತ್ತಿರುವ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲು ನಾಡಿನ ಯುವಜನತೆಯು ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸಬೇಕೆಂದು ರಾಘವೇಂದ್ರ ಚಿಂಚನಸೂರ ಹೇಳಿದ್ದಾರೆ.
ಬಿಜೆಪಿಯ ಕಲಬುರಗಿ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾಗಿರುವ ರಾಘವೇಂದ್ರ ಚಿಂಚನಸೂರ ಮತ್ತು ಕಲಬುರಗಿ ಬಿಜೆಪಿಯ ಐಟಿ ಸೆಲ್ ಪ್ರಮುಖ ಶರಣ್ ಅವರು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ತಮ್ಮ ಬೆಂಬಲಿಗರೊಂದಿಗೆ ಆಮ್ ಆದ್ಮಿ ಪಾರ್ಟಿ ಸೇರಿದ ಬಳಿಕ ಮಾತನಾಡಿದರು.
ಜನಸೇವೆ ಮಾಡಬೇಕೆಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದ ನಾನು ದಲಿತರಿಗೆ, ಹಿಂದುಳಿದವರಿಗೆ ಹಾಗೂ ಸಮಾಜದ ದಮನಿತ ಜನರಿಗೆ ಸಂವಿಧಾನ ಬದ್ಧವಾದ ಸೇವೆ, ಸೌಕರ್ಯಗಳು ಸಿಗುವಂತೆ ಮಾಡಲು ಹೋರಾಡುತ್ತಿದ್ದೇನೆ. ಇದಕ್ಕಾಗಿ “ಸ್ವಾಭಿಮಾನ ಜನತಾ ಸಂಘ” ಎಂಬ ಸಂಘಟನೆಯನ್ನು ರಚಿಸಿಕೊಂಡು ಕಳೆದ ಒಂದೂವರೆ ದಶಕದಿಂದ ಸಮಾಜದ ದನಿಯಾಗಿದ್ದೇನೆ.
ಬಿಜೆಪಿಯಲ್ಲಿ ನಂಬಿಕೆಯಿಟ್ಟು ಆ ಪಕ್ಷವನ್ನು ಸೇರಿದ್ದೆ. ಆದರೆ ಜನವಿರೋಧಿಯಾಗಿರುವ ಬಿಜೆಪಿಯಿಂದ ದಲಿತರು ಸೇರಿದಂತೆ ಯಾರಿಗೂ ಉಪಯೋಗವಿಲ್ಲ ಎಂಬುದು ಅರಿವಾಗಿದೆ. ಕಲಬುರಗಿ ಸೇರಿದಂತೆ ಸಂಪೂರ್ಣ ಉತ್ತರ ಕರ್ನಾಟಕವನ್ನು ಬಿಜೆಪಿ ಕಡೆಗಣಿಸುತ್ತಿದೆ” ಎಂದು ಚಿಂಚನಸೂರ ಆರೋಪಿಸಿದರು.
ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡರು ಹಾಗೂ ಮಾಜಿ ಶಾಸಕರಾದ ಎಚ್.ಡಿ.ಬಸವರಾಜು ಮಾತನಾಡಿ, ರಾಘವೇಂದ್ರ ಚಿಂಚನಸೂರರವರು ದಲಿತರು, ಹಿಂದುಳಿದವರು ಹಾಗೂ ಸಾಮಾನ್ಯ ಜನರ ಬಗ್ಗೆ ಅಪಾರ ಕಾಳಜಿ ಹೊಂದಿರುವ ನಾಯಕರಾಗಿದ್ದಾರೆ.
ಜನರ ಕಷ್ಟಗಳಿಗೆ ಸ್ಪಂದಿಸಿದ ಅನುಭವ ಅವರಿಗಿದೆ. ಅವರ ಸೇರ್ಪಡೆಯಿಂದ ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಆಮ್ ಆದ್ಮಿ ಪಾರ್ಟಿಗೆ ಆನೆಬಲ ಬಂದಂತಾಗಿದೆ. ಅಲ್ಲಿನ ಇನ್ನಷ್ಟು ಯುವ ನಾಯಕರು ಪಕ್ಷ ಸೇರುವ ನಿರೀಕ್ಷೆಯಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಎಪಿಯ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮಾ ಹಾಗೂ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ask opposition ruled states to reduce oil prices.