ಹುಬ್ಬಳ್ಳಿ: ನಮ್ಮ ಕಾಯ್ದೆಯಲ್ಲಿ ಲೋಪದೋಷ ಇಲ್ಲ ಅಂತ ಹೇಳಿದ್ದು ನಿಜ. ಆದರೆ ರೈತರ ಹಿತಕ್ಕಾಗಿ ಕೃಷಿ ಕಾಯ್ದೆ ಹಿಂಪಡೆದಿದ್ದೇವೆ. ಯಾವುದೇ ಚುನಾವಣೆ ಮುಂದೆ ಇಟ್ಟುಕೊಂಡು ಈ ರೀತಿ ತೀರ್ಮಾನ ಮಾಡಿಲ್ಲ. ಇದರಲ್ಲಿ ಸೋಲು ಗೆಲುವು ಪ್ರಶ್ನೆ ಇಲ್ಲ, ಇದು ಉತ್ತಮ ನಿರ್ಧಾರ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕೇಂದ್ರ ಸರ್ಕಾರ ಕೃಷಿ ಕಾಯಿದೆ ಹಿಂಪಡೆದ ಬಳಿಕ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಈ ಐತಿಹಾಸಿಕ ತೀರ್ಮಾನವನ್ನು ಈಗ ತೆಗೆದುಕೊಂಡಿದ್ದಾರೆ. ರೈತ ಸಮೂಹಕ್ಕೆ ಒಂದು ಒಳ್ಳೆಯ ತೀರ್ಮಾನದ ಮೂಲಕ ಖುಷಿ ಕೊಟ್ಟಿದ್ದಾರೆ ಎಂದರು.
ಕೃಷಿ ಕಾಯ್ದೆ ಹೋರಾಟದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಚುನಾವಣೆ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿಲ್ಲ. ಆ ಸಂದರ್ಭದಲ್ಲಿ ಏನೆಲ್ಲಾ ಆಯ್ತು ಎನ್ನುವುದು ಬೇರೆ. ಆದರೆ ಒಣ ಪ್ರತಿಷ್ಠೆಗೆ ಒಳಗಾಗದೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇತ್ತೀಚೆಗೆ ಮಳೆಯಿಂದಾಗಿ ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರವಾಗಿದೆ. ಅವರ ಸಂಕಷ್ಟಕ್ಕೆ ನಾವು ಸಹ ಸಹಕರಿಸಲಿದ್ದೇವೆ. ಈ ಮಳೆಯ ಅಬ್ಬರದಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಯಾಗಿದೆ. ಬೆಂಗಳೂರು ಸೇರಿದಂತೆ ಎಲ್ಲ ಕಡೆ ಇದೆ ಪರಿಸ್ಥಿತಿ ಇದೆ ಎಂದು ಅಭಿಪ್ರಾಯಪಟ್ಟರು.
ಬಿಟ್‍ಕಾಯಿನ್ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಪ್ರಧಾನಿ ಸಹ ಹೇಳಿದ್ದಾರೆ. ಇದೊಂದು ಆಕ್ಷಮ್ಯ ಅಪರಾಧ, ಯಾರೇ ತಪ್ಪು ಮಾಡಿದ್ದರೂ, ಅವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ ಎಂದರು.
ಇನ್ನು ನನ್ನ ರಾಜಕೀಯಕ್ಕೆ ಯಾವುದೇ ಕಡಿವಾಣ ಹಾಕಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಆದರೆ ನಾನು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ ಬಂದಿದ್ದೇನೆ. ರಾಜ್ಯದ ಉದ್ದಗಲಕ್ಕೂ ಸಹ ಪ್ರವಾಸ ಮಾಡುತ್ತಿದ್ದೇನೆ. ಎಲ್ಲಿಯೇ ಹೋದರೂ ನಮ್ಮ ಯಡಿಯೂರಪ್ಪ ಅಂತ ಅಭಿಮಾನ ತೋರಿಸುತ್ತಿದ್ದಾರೆ ಎಂದು ಬಿಎಸ್‍ವೈ ರಾಜಕೀಯಕ್ಕೆ ಕಡಿವಾಣ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದರು.