ಮುಂಬೈ: ರಾಜ್ಯ ಸರ್ಕಾರದೊಂದಿಗೆ ಎಂಎಸ್‌ಆರ್‌ಟಿಸಿಯನ್ನು ವಿಲೀನಗೊಳಿಸಬೇಕೆಂದು ಆಗ್ರಹಿಸಿ ಕಳೆದ 22ದಿನಗಳಿಂದ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಈಗ ಹಿಂಸಾಚಾರಕ್ಕೆ ತಿರುಗುತ್ತಿದೆ. ಈ ಹಿಂಸಾಚಾರಕ್ಕೆ ಬಿಜೆಪಿ ನಾಯಕರೆ ಕಾರಣ ಎಂದು ಶಿವಸೇನೆ ಆರೋಪಿಸಿದೆ.
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (MSRTC) ನೌಕರರ ಮುಷ್ಕರ ಸತತ ಮೂರನೇ ವಾರವೂ ಮುಂದುವರಿದಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸಲು ಪಟ್ಟು ಹಿಡಿದಿರುವ ನೌಕರರು ಮುಷ್ಕರವನ್ನು ಮುಂದುವರಿಸುತ್ತಿರುವುದಕ್ಕೆ ಶಿವಸೇನೆ ಶುಕ್ರವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಾಲಯದ ಮಧ್ಯಪ್ರವೇಶದಿಂದಾಗಿ ಪ್ರತಿಭಟನಾನಿರತ ಸಾರಿಗೆ ನೌಕರರ ಒಕ್ಕೂಟಗಳ ಇತರ ಬೇಡಿಕೆಗಳನ್ನು ಈಡೇರಿಸಲು ಚರ್ಚೆ ಮಾಡುವುದಕ್ಕೆ ಸಹಕಾರಿಯಾದೆ ಈ ನಡುವೆ ಬಿಜೆಪಿ ಮೂಗು ತೂರಿಸಿಕೊಂಡು ಬರುತ್ತಿರುವುದು ಏತಕ್ಕೆ ಎಂದು ಕೇಳುತ್ತಿರುವ ಶಿವಸೇನೆ, ತನ್ನ ಮುಖವಾಣಿ ಸಾಮ್ನಾ ಮೂಲಕ, ಪ್ರತಿಭಟನೆಗಳು ಹಿಂಸಾತ್ಮಕ ತಿರುವನ್ನು ತೆಗೆದುಕೊಂಡಿರುವುದಕ್ಕೆ ಆಕ್ರೋಧ ವ್ಯಕ್ತಪಡಿಸಿದೆ.
ಎಂಎಸ್‌ಆರ್‌ಟಿಸಿ ನೌಕರರು ಮುಷ್ಕರ ನಡೆಸುತ್ತಿದ್ದು, ಸರ್ಕಾರಿ ಬಸ್ ಸೇವೆಗಳನ್ನು ಸ್ಥಗಿತಗೊಂಡಿವೆ ಇನ್ನೊಂದೆಡೆ ಎಂಎಸ್‌ಆರ್‌ಟಿಸಿ ಮುಷ್ಕರ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಬಿಜೆಪಿಯನ್ನು ಶಿವಸೇನೆ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವುದಕ್ಕೆ ಶಿವಸೇನೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆದುತ್ತಿದ್ದು, ಮಹಾರಾಷ್ಟ್ರದ ಬಸ್ ಡಿಪೋಗಳಾದ್ಯಂತ ಹಿಂಸಾತ್ಮಕ ಘಟನೆಗಳು ಉಲ್ಬಣಗೊಳ್ಳುವುದಕ್ಕೆ ಬಿಜೆಪಿಯ ಹಿಂದಿನ ಆಡಳಿತ ವೈಫಲ್ಯವೇ ಕಾರಣ ಎಂದು ಶಿವಸೇನೆ ಹೇಳಿಕೊಂಡಿದೆ.
ಪ್ರತಿಭಟನೆಯನ್ನು ಮುರಿಯಲು ಸರ್ಕಾರ ಪ್ರಯತ್ನಿಸುತ್ತಿಲ್ಲ ಎಂದು ಹೇಳಿರುವ ಶಿವಸೇನೆ, ಬಿಜೆಪಿ ವಿರುದ್ಧ ಕಿಡಿಕಾರಿದ್ದು, ನೀವು ಏನು ಸಾಧಿಸಲು ಹೊರಟಿದ್ದೀರಿ ಎಂದು ಪ್ರಶ್ನೆ ಮಾಡಿದೆ. ಇನ್ನು 2293 ಎಂಎಸ್‌ಆರ್‌ಟಿಸಿ ನೌಕರರನ್ನು ಕೆಲಸಕ್ಕೆ ಹಾಜರಾಗದಂತೆ ಸಮರ್ಥಿಸಿಕೊಳ್ಳು ಅವರಿಗೆ ‘ಪಿಎಂ ಕೇರ್ಸ್ ಫಂಡ್’ ಮೂಲಕ ಬಿಜೆಪಿ ಹಣ ನೀಡುತ್ತದೆಯೇ ಎಂದು ಶಿವಸೇನೆ ಕೇಳಿದೆ.
ಈ ನಡುವೆ 15,000 ಸಾರಿಗೆ ನೌಕರರು ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಈ ಸಂಖ್ಯೆ ಕ್ರಮೇಣ ಹೆಚ್ಚಾಗಲಿದೆ ಎಂದು ಸೇನೆ ಹೇಳಿದೆ.
23ನೇ ದಿನವೂ ಮುಂದುವರಿದಿರುವ ಎಂಎಸ್‌ಆರ್‌ಟಿಸಿ ನೌಕರರ ಮುಷ್ಕರ: ಎಂಎಸ್‌ಆರ್‌ಟಿಸಿ ಯನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸಬೇಕೆಂದು ಒಕ್ಕೂಟಗಳು ಒತ್ತಾಯಿಸಿದ್ದರಿಂದ ಎಂಎಸ್‌ಆರ್‌ಟಿಸಿಯ ಎಲ್ಲಾ 250 ಬಸ್ ಡಿಪೋಗಳಿಗೂ ನವೆಂಬರ್ 9 ರಿಂದ ಬೀಗ ಜಡಿಯಲಾಗಿದೆ. ನಿಗಮವು ಈವರೆಗೆ 12,000 ಕೋಟಿ ರೂ. ನಷ್ಟದ ಹೊರತಾಗಿಯೂ ಕಳೆದ 18 ತಿಂಗಳ ಸಂಬಳವನ್ನು ನೌಕರರಿಗೆ ಪಾವತಿಸಿದೆ ಎಂದು ಅಧಿಕಾರಿಗಳು ಕಳೆದ ವಾರ ಹೇಳಿದ್ದರು.
ಜತೆಗೆ ತುಟ್ಟಿಭತ್ಯೆ ಹೆಚ್ಚಳ, ಮನೆ ಬಾಡಿಗೆ ಭತ್ಯೆ ಮತ್ತು ನೌಕರರಿಗೆ ದೀಪಾವಳಿ ಉಡುಗೊರೆಗಳಂತಹ ಇತರ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಅದು ಹೇಳಿದೆ. ಆದರೂ ಮುಷ್ಕರ ನಡೆಸುತ್ತಿದ್ದು, ಇದರಿಂದ ಸಾಮಾನ್ಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾಋೆ. ಅಲ್ಲದೆ ಮುಷ್ಕರದಿಂದ ಎಂಎಸ್‌ಆರ್‌ಟಿಸಿಗೆ ಪ್ರತಿದಿನ 15 ರಿಂದ 20 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಎಂಎಸ್‌ಆರ್‌ಟಿಸಿ ನೌಕರರು ಅಕ್ಟೋಬರ್ 28 ರಿಂದ ನಿಗಮವನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸಬೇಕು ಮತ್ತು ನಮ್ಮನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಪ್ರಾರಂಭಿಸಿದ್ದಾರೆ.
ಈ ನಡುವೆ ಎಂಎಸ್‌ಆರ್‌ಟಿಸಿಯನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸುವ ಬೇಡಿಕೆಯನ್ನು ಪರಿಹರಿಸಲು ಮಹಾರಾಷ್ಟ್ರ ಸರ್ಕಾರವು ಸಂಪೂರ್ಣ ಸಹಕಾರ ನೀಡುತ್ತಿದ್ದು ಮತ್ತು ಸಮಿತಿಯನ್ನು ರಚಿಸಿದೆ. ಆದರೂ ಸಹ ಅಧಿಕೃತ ಘೋಷಣೆ ಹೊರಬೀಳುವವರೆಗೂ ಮುಷ್ಕರವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ನೌಕರರು ಪಟ್ಟು ಹಿಡಿದಿದ್ದಾರೆ.