ಮೈಸೂರು: ವಿಧಾನ ಪರಿಷತ್ ಚುನಾವಣೆಗೆ ಸ್ಪ ರ್ಧಿಸಲುಮುಂದಾಗಿರುವ ದಿನೇಶ್ ಗೂಳಿಗೌಡ ಅವರನ್ನು ತಮ್ಮ ವಿಶೇಷ ಕರ್ತವ್ಯಾಧಿಕಾರಿ ಸ್ಥಾನದಿಂದ ತೆಗೆದು ಹಾಕಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂಡ್ಯದಲ್ಲಿ ಸ್ಪರ್ಧೆ ಮಾಡುವಂತೆ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಹೇಳಿದ್ದಾರೆ ಎಂಬುದಾಗಿ ದಿನೇಶ್ ನನಗೆ ನಾಲ್ಕೈ ದಿನಗಳ ಹಿಂದೆಮಾಹಿತಿ ನೀಡಿದರು. ವಿಷಯ ಗೊತ್ತಾಗುತ್ತಿದ್ದಂತೆ ವಿಶೇಷ ಕರ್ತವ್ಯಾಧಿಕಾರಿ ಹುದ್ದೆಯಿಂದ ತೆಗೆದು ಹಾಕಲು ಶಿಫಾರಸು ಮಾಡಿದೆ. ಈ ವಿಚಾರವನ್ನು ಪಕ್ಷದ ವರಿಷ್ಠರಿಗೂ ತಿಳಿಸಿದ್ದೇನೆ ಎಂದರು.
ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲು ದಿನೇಶ್ ಪ್ರಯತ್ನ ನಡೆಸಿರುವ ವಿಚಾರ ತಮಗೆ ಗೊತ್ತಿಲ್ಲವೇ ಎಂಬ ಪ್ರಶ್ನೆಗೆ, ಕಾಂಗ್ರೆಸ್ ಸೇರುವುದು, ಚುನಾವಣೆಗೆ ಸ್ಪರ್ಧಿಸುವುದು, ರಾಜಕೀಯ ಮಾಡುವುದು ಅವರ ವೈಯಕ್ತಿಕ ವಿಚಾರ ಎಂದು ಹೇಳಿದರು.
ವಿಧಾನ ಪರಿಷತ್‌ನ ಮಂಡ್ಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ದಲ್ಲಿ ದಿನೇಶ್ ಗೂಳಿಗೌಡ , ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಂಭವವಿದೆ.
ಕಾಂಗ್ರೆಸ್ ಟಿಕೆಟ್ ಸಿಗುವ ಭರವಸೆ ಇದೆ. ಸಿದ್ದ ರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದೇನೆ. ಇಂದು ನಾಗಮಂಗಲದಲ್ಲಿ ಮತಯಾಚಿಸಿದ್ದೇನೆ ಎಂದು ದಿನೇಶ್ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಕೆಲಸಮಾಡಿದ್ದು, ಕೆಪಿಸಿಸಿ ಮಾಧ್ಯಮ ತಂಡದಲ್ಲಿದ್ದೆ. ಬಿಜೆಪಿ ಸರ್ಕಾರ ಬಂದು, ಸೋಮಶೇಖರ್ ಸಚಿವರಾದಾಗಿನಿಂದ ಅವರಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದೆ ಎಂದರು.
ದಿನೇಶ್ ಬಿಜೆಪಿಮುಖಂಡ ಎಸ್.ಎಂ. ಕೃಷ್ಣ ಅವರಿಗೂ ಆಪ್ತರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸಂಪರ್ಕಿಸಿದ್ದ ಕೃಷ್ಣ, ಆಪ್ತನಿಗೆ ಟಿಕೆಟ್ ನೀಡುವಂತೆ ಪ್ರಭಾವ ಬೀರಿದ್ದರು ಎಂಬ ಮಾತು ಕೇಳಿ ಬರುತ್ತಿದೆ.