Please assign a menu to the primary menu location under menu

NEWSಕೃಷಿನಮ್ಮಜಿಲ್ಲೆ

ಹಾವೇರಿ ಜಿಲ್ಲೆಯಲ್ಲಿ ಐದು ಕಾಳಜಿ ಕೇಂದ್ರಗಳ ಸ್ಥಾಪನೆ – 1125 ಜನರ ಸ್ಥಳಾಂತರ

ಸಂತ್ರಸ್ತರ ಸಂಕಷ್ಟಗಳಿಗೆ ತ್ವರಿತವಾಗಿ ಸ್ಪಂದಿಸಿ ಪರ್ಯಾಯ ಕ್ರಮಕೈಗೊಳ್ಳಲು ಡಿಸಿ ಸೂಚನೆ

ವಿಜಯಪಥ ಸಮಗ್ರ ಸುದ್ದಿ

ಹಾವೇರಿ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿ ಮಳೆಹಾನಿ ಸಂತ್ರಸ್ತರಿಗೆ ತ್ವರಿತವಾಗಿ ಸ್ಪಂದಿಸಲು ಕ್ರಮವಹಿಸುವಂತೆ ತಹಶೀಲ್ದಾರಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ  ಸೂಚನೆ ನೀಡಿದ್ದಾರೆ.

ಮಳೆಯಿಂದ ಹಾನಿಯಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್‌ಗಳಿಂದ ಹಾನಿಯ ಮಾಹಿತಿ ಪಡೆದುಕೊಂಡರು.

ನದಿಪಾತ್ರ, ಕೆರೆ-ಹಳ್ಳಗಳ ದಡದಲ್ಲಿರುವ ಜನವಸತಿ ಹಾಗೂ ತಗ್ಗು ಪ್ರದೇಶಗಳ ಮೇಲೆ ತೀವ್ರ ನಿಗಾವಹಿಸಬೇಕು. ಅಪಾಯದ ಮುನ್ಸೂಚನೆ ಅರಿತು ಜನರನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸಲು ಎಲ್ಲ ಕ್ರಮಗಳನ್ನು ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ತಾತ್ಕಾಲಿಕ ನೆರೆಯಿಂದ ರಸ್ತೆ ಸಂಪರ್ಕಗಳು ಕಡಿತಗೊಂಡಿದ್ದರೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು. ತುಂಬಿದ ಹಳ್ಳ-ಕೊಳ್ಳಗಳಲ್ಲಿ ಜನ, ಜಾನುವಾರು ಸಂಚರಿಸದಂತೆ ಕ್ರಮಕೈಗೊಳ್ಳಬೇಕು. ತಾತ್ಕಾಲಿಕ ಬಂದಾ ರಸ್ತೆಗಳಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಕ್ರಮವಹಿಸಬೇಕು. ಮಳೆಯಿಂದ ಕೊಚ್ಚಿ ಒಂದೊಮ್ಮೆ ಸಂಪರ್ಕ ಕಡಿತಗೊಂಡಿದ್ದರೆ ತತಕ್ಷಣ ತಾತ್ಕಾಲಿಕ ದುರಸ್ತಿಗೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶಾಲಾ ಮಕ್ಕಳ ಬಗ್ಗೆ ಗರಿಷ್ಠ ಎಚ್ಚರವಹಿಸಬೇಕು. ಮಳೆಯಿಂದಾಗಿ ಶಿಥಿಲಗೊಂಡಿರುವ ಶಾಲಾ ಕಟ್ಟಡಗಳನ್ನು ಯುದ್ಧೋಪಾದಿಯಲ್ಲಿ ಗುರುತಿಸಿ ಸ್ಥಳಾಂತರಿಸುವ ಕೆಲಸವನ್ನು ಮಾಡಬೇಕು. ಯಾವುದೇ ಕಾರಣಕ್ಕೂ ಶಿಥಿಲ ಕಟ್ಟಡಗಳಲ್ಲಿ ಮಕ್ಕಳನ್ನು ಕೂರಿಸಿ ತರಗತಿಗಳನ್ನು ನಡೆಸದಂತೆ ಸೂಚನೆ ನೀಡಿದ್ದಾರೆ.

ಹಾನಿಯ ವಿವರ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ನವಂಬರ್ 1 ರಿಂದ 19ರವರೆಗೆ 11 ಪೂರ್ಣ ಹಾಗೂ 810 ಭಾಗಶಃ ಸೇರಿ 821 ಮನೆಗಳ ಹಾನಿ ಸಂಭವಿಸಿದ್ದು, ನ.20 ರಂದು 20 ಪೂಣ ಹಾಗೂ 311 ಭಾಗಶಃ ಸೇರಿ 331 ಮನೆಗಳಿಗೆ ಹಾನಿಯಾಗಿದೆ. ಈವರೆಗೆ 31 ಪೂರ್ಣ ಹಾಗೂ 1122 ಭಾಗಶಃ ಸೇರಿ 1152 ಮನೆಗಳಿಗೆ ಹಾನಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ನವಂಬರ್ 1 ರಿಂದ ನ.19ರವರೆಗೆ 18,214.68 ಹೆಕ್ಟೇರ್ ಕೃಷಿ ಹಾಗೂ 230 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ 18,444.68 ಹೆಕ್ಟೇರ್ ಬೆಳೆಹಾನಿಯಾಗಿರುವ ಪ್ರಾಥಮಿಕ ವರದಿ ಲಭ್ಯವಾಗಿದೆ.

ಜಾನುವಾರು ಹಾನಿ: ದೇವರಗುಡ್ಡ ಗ್ರಾಮದಲ್ಲಿ ಒಂಭತ್ತು ಕುರಿ ಹಾಗೂ ಒಂದು ಮೇಕೆ, ಮೆಡ್ಲೇರಿ ಗ್ರಾಮದಲ್ಲಿ ಆರು ಕುರಿ ಹಾಗೂ ಎರಡು ಮೇಕೆ ಸೇರಿ 18 ಕುರಿ-ಮೇಕೆಗಳು ಹಾಗೂ ಹಾನಗಲ್‍ನಲ್ಲಿ ಒಂದು ಆಕಳ ಜೀವಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ರಸ್ತೆ ಸಂಪರ್ಕ ಕಡಿತ: ಬ್ಯಾಡಗಿ ತಾಲೂಕು ನಂದಿಹಳ್ಳಿ ಕೋಡಿ ಕಾರಣ ಮಾಸಣಗಿ-ತಿಳುವಳ್ಳಿ ರಸ್ತೆ ಸಂಪರ್ಕ, ರಟ್ಟಿಹಳ್ಳಿ ತಾಲೂಕು ಸತ್ತಗಿಹಳ್ಳಿಯಿಂದ ಎಲಿವಾಳ ರಸ್ತೆ, ಶಿಗ್ಗಾಂವ ತಾಲೂಕು ಚಿಕ್ಕನೆಲ್ಲೂರು ಮೋಟಹಳ್ಳಿ ರಸ್ತೆ, ಹಿರೇಕೆರೂರ ತಾಲೂಕು ಚಿಕ್ಕಮತ್ತೂರು ಕೆರೆ ಕೋಡಿ ಬಿದ್ದು ಹಿರೇಮತ್ತೂರು-ಗಾಂಗಾಪುರ ಗ್ರಾಮದ ರಸ್ತೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಹಾನಗಲ್ ತಾಲೂಕಿನ ದಿಡಗೂರ-ಹೆರೂರ ರಸ್ತೆ, ಲಕಮಾಪೂರ-ಬಾಳಂಬೀಡ ರಸ್ತೆ, ಯತ್ತಿನಹಳ್ಳಿ-ಕಿರವಾಡಿ ರಸ್ತೆ, ನಾಗನೂರ-ಕೂಡಲ ರಸ್ತೆ, ಸೋಮಸಾಗರ-ಹಿರೇಬಾಸೂರ, ಕಂಚಿನೆಗಳೂರ-ಬೆಳಗಾಲಪೇಟೆ ರಸ್ತೆಗಳ ಸಂಪರ್ಕಗಳು ತಾತ್ಕಾಲಿಕವಾಗಿ ಕಡಿತಗೊಂಡಿವೆ.

ಮನೆಗೆ ನೀರು: ಹಿರೇಕೆರೂರು ತಾಲೂಕಿನ ಹೊಲಬಿಕೊಂಡ ಗ್ರಾಮದ ಕೆಲ ಮನೆಗಳಿಗೆ ನೀರು ನುಗ್ಗಿದೆ ಹಾಗೂ ರಾಣೇಬೆನ್ನೂರ ತಾಲೂಕಿನ ಚಿಕ್ಕಹರಹಳ್ಳಿ ಗ್ರಾಮದ ಕೆಲ ಜಮೀನುಗಳಿಗೆ ನೀರು ನುಗ್ಗಿ ಬೆಳೆಹಾನಿ ಸಂಭವಿಸಿದೆ. ರಾಣೇಬೆನ್ನೂರ ತಾಲೂಕಿನ ಕುಪ್ಪೇಲೂರಿನಲ್ಲಿ ಒಂದು ವಿದ್ಯುತ್ ಕಂಬ ಹಾಗೂ ಒಂದು ಟ್ರಾನ್ಸ್‍ಫರ್ಮರ್‍ಗೆ ಹಾನಿಯಾಗಿರುವ ವರದಿಯಾಗಿದೆ.

ಪರಿಹಾರ ಕೇಂದ್ರಗಳು: ರಾಣೇಬೆನ್ನೂರ ನಗರದ 4ನೇ ವಾರ್ಡ್‍ನ ದೊಡ್ಡ ಕೆರೆ ಕೋಡಿ ಬಿದ್ದು ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ 56 ಕುಟುಂಬಗಳ 70 ವೃದ್ಧರು, 161 ಪುರುಷ, 130 ಮಹಿಳೆಯರು ಹಾಗೂ 40 ಮಕ್ಕಳು ಸೇರಿ 401 ಜನ ನಿರಾಶ್ರಿತರನ್ನು ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿದೆ.

ಹಾವೇರಿ ತಾಲೂಕಿನ ತಿಮ್ಮಾಪೂರ ಎಂ.ಎ.ಗ್ರಾಮದ 17 ಕುಟುಂಬಗಳ 82 ಜನರನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ನಾಲ್ಕು ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ.

ಬ್ಯಾಡಗಿ ಪಟ್ಟಣದ ಗಾಂಧಿನಗರ ಮೂರು ಕುಟುಂಬಗಳ ತಲಾ ಐದು ಪುರುಷ ಹಾಗೂ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ದುರ್ಗಮ್ಮ ದೇಗುಲದ ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಗಿದೆ. ಬ್ಯಾಡಗಿ ತಾಲೂಕಿನ ಬಡಮಲ್ಲಿ ತಾಂಡಾದ ಐದು ಕುಟುಬಂದ 30 ಜನರನ್ನು ಸೇವಾಲಾಲ ಭವನದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕದರಮಂಡಲಗಿಯ 12 ಕುಟುಂಬಗಳ 60 ಜನರನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ.

ರಾಣೇಬೆನ್ನೂರ ಪಟ್ಟಣದ ದೊಡ್ಡ ಕೆರೆ ಕೋಡಿಯಿಂದ ಗಂಗಾಪುರ ರಸ್ತೆಯ ಬಡಾವಣೆಯಲ್ಲಿ ನೀರಿನ ಹರಿವು ಉಂಟಾಗಿದ್ದು, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಮೆಡ್ಲೇರಿ ರಸ್ತೆಯ ಮಾರ್ಗದಲ್ಲಿ ರೈಲ್ವೆ ಟ್ರ್ಯಾಕ್ ಪಕ್ಕ ಒಳಚರಂಡಿ ಹಾಗೂ ದೇವರಗುಡ್ಡದ ರೈಲ್ವೆ ಮೇಲುಸೇತುವೆ ಕೆಳಬದಿಯಲ್ಲಿ ನೀರಿನ ಹರಿವು ಕುರಿತಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ದುರಸ್ತಿಗೆ ಸೂಚನೆ ನೀಡಿದರು.

ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಸೀಲ್ದಾರ್‌ ಜಿ.ಎಸ್.ಶಂಕರ್, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!
LATEST
ಮುಂದಿನ ಪೀಳಿಗೆ ಉಳಿವಿಗಾಗಿ ಸಾವಯವ ಕೃಷಿ ಅವಶ್ಯಕ: ಸಚಿವ ಮುನಿಯಪ್ಪ ಲೋಕ ಸೇವಾ ಆಯೋಗಗಳು ಕಾರ್ಯಾಂಗಕ್ಕೆ ಅಭೂತಪೂರ್ವ ಕೊಡುಗೆ ನೀಡುವ ಪ್ರಜಾ ಪ್ರಭುತ್ವದ ಸ್ತಂಭಗಳು: ಸಿಎಂ ಸಿದ್ದರಾಮಯ್ಯ KSRTC: ಶಸ್ತ್ರಚಿಕಿತ್ಸೆ ಗೊಳಗಾದ ಚಾಲಕನಿಗೆ ರಜೆ ಕೊಡದೆ ಗೈರು ಹಾಜರಿಹಾಕಿ 4 ತಿಂಗಳ ವೇತನ ತಡೆಹಿಡಿದ ಅಧಿಕಾರಿಗಳು KSRTC ಮಂಡ್ಯ: ಚಾಲಕನ ಮೇಲೆ ವ್ಯಕ್ತಿ ಹಲ್ಲೆ -ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಯುವ ನಾಯಕತ್ವ ತರಬೇತಿ ಶಿಬಿರ- ವಿಶೇಷ ಶಿಬಿರಗಳಿಂದ ನಾಯಕತ್ವ ಕೌಶಲ್ಯ ವೃದ್ಧಿ ಹೇಮಗಿರಿಯ ಕಲ್ಯಾಣ ವೆಂಕಟರಮಣ ಸ್ವಾಮಿ ಬೆಟ್ಟದಲ್ಲಿ ವೈಕುಂಠ ಏಕಾದಶಿ ಸಂಭ್ರಮ ಜ.19ರ BMTC ಸಂಘದ ಚುನಾವಣೆಯಲ್ಲಿ ಬಳಕೆದಾರ ಸಹಕಾರ ಸಂಘ ಲೂಟಿಕೋರರ ಹೆಡೆಮುರಿ ಕಟ್ಟಿ - ನೊಂದ ನೌಕರರ ಮನವಿ KSRTC ಹಾಸನ ಹೊಸ ಬಸ್‌ ನಿಲ್ದಾಣ: ಬಸ್‌ನಲ್ಲಿ ಮಲಗಿದ್ದ ಚಾಲನಾ ಸಿಬ್ಬಂದಿಗಳ ಮುಖಕ್ಕೆ ಸ್ಪ್ರೇ ಹೊಡೆದು ಕಳವಿಗೆ ಯತ್ನ KSRTC ನೌಕರರಿಗೆ ನಗದು ರಹಿತ ಚಿಕಿತ್ಸೆ ಶುರು : ಎಲ್ಲಿ ಬೇಕಾದರೂ ಟ್ರೀಟ್‌ಮೆಂಟ್‌ ಪಡೆಯಿರಿ  KSRTC: ಓಂ ಶಕ್ತಿಗೆ ಹೋಗಿ ಬರುತ್ತಿದ್ದ ಬಸ್‌ -ಲಾರಿ ನಡುವೆ ಭೀಕರ ಅಪಘಾತ- ನಾಲ್ವರು ಸಾವು, ಬಸ್‌ ಚಾಲಕನ ಸ್ಥಿತಿ ಚಿಂತಾ...