ಮೈಸೂರು: ಮಾಜಿ ಸಚಿವ, ಹಾಲಿ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಜೆಡಿಎಸ್ ಬಾಗಿಲು ಶಾಶ್ವತವಾಗಿ ಮುಚ್ಚಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಪರ ಮತಯಾಚಿಸಿ ಮಾತನಾಡಿದ ಅವರು, ಜಿ.ಟಿ.ದೇವೇಗೌಡ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಎಚ್.ಡಿ.ದೇವೇಗೌಡರು, ನಾನು ಮತ್ತು ಪುತ್ರ ನಿಖಿಲ್ ಸಾಕಷ್ಟು ಪ್ರಯತ್ನಿಸಿದೆವು.
ಆದರೆ, ಯಾರದ್ದೋ ಕಲ್ಯಾಣಕ್ಕಾಗಿ, ಯಾರನ್ನೋ ಮುಖ್ಯಮಂತ್ರಿ (ಸಿದ್ದರಾಮಯ್ಯ) ಮಾಡಲು ಜಿಟಿಡಿ ದೇಗುಲದಲ್ಲಿ ಕಲ್ಯಾಣೋತ್ಸವ ಮಾಡಿಸಿದ್ದಾರೆ. ಆದರೆ ನಾನು ಬಡವರ, ರೈತರ ಕಲ್ಯಾಣಕ್ಕಾಗಿ ಹೋರಾಡುತ್ತೇನೆ ಎಂದು ಹೇಳಿದರು.
ಇನ್ನು ಸಿದ್ದರಾಮಯ್ಯ ಅವರಿಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಿದ್ದರಾಮಯ್ಯ ಮಗ ಶಾಸಕರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಕುಟುಂಬದ ನಾಲ್ವರು ರಾಜಕಾರಣದಲ್ಲಿದ್ದಾರೆ. ಸಿದ್ದರಾಮಯ್ಯ ಮಗ ಅಕಾಲಿಕ ಮರಣಕ್ಕೀಡಾದರು. ಅವರು ಸಹ ಸಕ್ರಿಯ ರಾಜಕಾರಣದಲ್ಲಿದ್ದರು. ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಹಲವರು ಈ ರೀತಿ ಇದ್ದಾರೆ ಎಂದರು.
ಅಲ್ಲದೆ ಬಿಜೆಪಿ ಕಾಂಗ್ರೆಸ್ ಪಕ್ಷದವರು ಇದಕ್ಕೆ ಕಾನೂನು ಜಾರಿ ಮಾಡಲಿ. ತಮ್ಮ ಸಾಮರ್ಥ್ಯದಿಂದ ಸಂವಿಧಾನ ತಿದ್ದುಪಡಿ ಮಾಡಲಿ. ಕುಟುಂಬದ ಎಷ್ಟು ಜನ ರಾಜಕಾರಣಕ್ಕೆ ಬರಬೇಕು ಎಂಬ ನಿಯಮ ಮಾಡಲಿ ಎಂದು ಸವಾಲು ಹಾಕಿದರು.
ಜೆಡಿಎಸ್ ಬಿಜೆಪಿಯ ʼಬಿʼ ಟೀಂ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ತಮ್ಮ ಬಾಯಿಗೆ ಏಕೆ ಶ್ರಮ ಕೊಡುತ್ತಿದ್ದಾ? ಅವರು ಈ ರೀತಿ ಸ್ಲೇಟ್‌ನಲ್ಲಿ ಬರೆದು ಕುತ್ತಿಗೆಗೆ ಹಾಕಿಕೊಂಡು ಓಡಾಡಲಿ. ಸುಮ್ಮನೆ ಪದೇಪದೆ ಈ ರೀತಿ ಹೇಳಿ ಬಾಯಿ ಏಕೆ ನೋಯಿಸಿಕೊಳ್ಳಬೇಕು ಎಂದು ಪ್ರಶ್ನಿಸಿದರು.
2018ರಿಂದ ಇದೇ ರೀತಿ ಡಿಎಸ್ ಬಿಜೆಪಿಯ ʼಬಿʼ ಟೀಂ ಎಂಬ ಹೇಳಿಕೆ ನೀಡುತ್ತಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ತಿರುಗುಬಾಣವಾಗಲಿದೆ. ಇದರ ಪರಿಣಾಮ 2023ರಲ್ಲಿ ಜೆಡಿಎಸ್‍ಗೆ ಲಾಭವಾಗಲಿದೆ. ವಿಧಾನ ಪರಿಷತ್ ಚುನಾವಣೆಯಲ್ಲೂ ಜೆಡಿಎಸ್‍ಗೆ ಸ್ವಲ್ಪ ಅನುಕೂಲವಾಗಲಿದೆ. ಬಿಜೆಪಿ ಬೆಂಬಲಿಗರ ಮತ ಜೆಡಿಎಸ್‍ಗೆ ಬರಲಿದೆ ಎಂದು ಭರವಸೆಯನ್ನು ವ್ಯಕ್ತಪಡಿಸಿದರು.