ಬೆಂಗಳೂರು: ನಮ್ಮ ಗುರಿ 2023ರ ಸಾರ್ವತ್ರಿಕ ಚುನಾವಣೆ. ಆ ಚುನಾವಣೆಯಲ್ಲಿ 123 ಟಾರ್ಗೆಟ್ ಇದೆ ಎಂದು ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಮತ್ತು ಮುಂದಿನ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ತಳೆದಿರುವ ನಿಲುವನ್ನು ಬಹಿರಂಗಪಡಿಸುವ ಸಲುವಾಗಿ ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈಗಾಗಲೇ ಈ ಎರಡೂ ಚುನಾವಣೆಗಳ ಸಂಬಂಧ ಸ್ಥಳೀಯ ಮುಖಂಡರ ಜತೆ ಸಮಾಲೋಚನೆ ಮಾಡಿದ್ದೇನೆ. ಮುಖಂಡರ ಅಭಿಪ್ರಾಯಗಳನ್ನೂ ನಾವು ಸಂಗ್ರಹಿಸಿದ್ದೇವೆ ಎಂದರು.
ಇನ್ನು ವಿಧಾನ ಪರಿಷತ್ ಚುನಾವಣಾ ಪ್ರಚಾರದ ಅಂತಿಮ ಹಂತಕ್ಕೆ ಬಂದಿದ್ದೇವೆ. ಈ ನಡುವೆ ಪರಿಷತ್ ಚುನಾವಣೆಯ ಜೆಡಿಎಸ್ ನಿಲುವಿನ ಬಗ್ಗೆ ಸಾಕಷ್ಟು ಕುತೂಹಲ ಇದೆ. ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೆ ಎಂದು ಊಹಾಪೋಹದ ಸುದ್ದಿಗಳು ಬಂದಿವೆ ಎಂದು ಹೇಳಿದರು.
ಚುನಾವಣೆ ಘೋಷಣೆ ಬಳಿಕ ಕಾಂಗ್ರೆಸ್ ಪಕ್ಷವು ನಮ್ಮ ಪಕ್ಷವನ್ನು ಬಿಜೆಪಿ ಬಿ ಟೀಮ್ ಎಂದು ಹೇಳುತ್ತಿದೆ. ಜೆಡಿಎಸ್ ಆರು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸಿ ಬೇರೆ ಕಡೆ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದೂ ಹೇಳುತ್ತಿದ್ದಾರೆ.
ಆದರೆ ಬಿಜೆಪಿ ನಮ್ಮಿಂದ ಯಾವುದೇ ಬೆಂಬಲ ಕೋರಿಲ್ಲ. ಅದರೆ ಯಡಿಯೂರಪ್ಪ ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ನಮಗೆ ಬೆಂಬಲ ನೀಡಿ ಎಂದು ಹೇಳಿದ್ದಾರೆ. ಅಷ್ಟಕ್ಕೆ ಅದು ಸೀಮಿತವಾಗಿದೆ. ಹಾಗಂತ ಇದು ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲ. ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ಬೆಂಬಲ ನೀಡಿ ಎಂದು ಹೇಳಿರುವುದು ಎಂದು ಕುಮಾರಸ್ವಾಮಿ ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.
ಇನ್ನು ನಾವು ಅಭ್ಯರ್ಥಿ ಹಾಕಿರುವ ಜಾಗದಲ್ಲಿ ಯಾರ ಜತೆಯೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.