ಬೆಂಗಳೂರು: ಸ್ವಾಭಿಮಾನಿ ಸಾರಿಗೆ ನೌಕರರ ಪಾದಯಾತ್ರೆ 9ನೇ ದಿನವಾದ (ಡಿ.7) ಇಂದು ನೆಲಮಂಗಲದಿಂದ ವಿಧಾನಸೌದ ಕಡೆಗೆ ಸಾಗುತ್ತಿದ್ದು, ಮಾರ್ಗಮಧ್ಯೆ ಯಲಹಂಕದ ಬಿಎಂಟಿಸಿ 30ನೇ ಘಟಕದ ಸಹೋದ್ಯೋಗಿಗಳು ಪಾದಯಾತ್ರೆ ನಿರತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದರು.
ಪಾದಯಾತ್ರೆಗೆ ಬಹುತೇಕ ಎಲ್ಲ ನೌಕರರ ಸಂಘಟನೆಗಳ ಪಾಧಿಕಾರಿಗಳು, ಪ್ರಮುಖ ನಾಯಕರ ಜತೆಗೆ ಕನ್ನಡಪರ ವಿವಿಧ ಸಂಘಟನೆಗಳು ಭಾಗವಹಿಸುವ ಮೂಲಕ ಬೆಂಬಲ ಸೂಚಿವೆ.
ಇನ್ನು ಇಂದು ಸಂಜೆ ಜಾಲಹಳ್ಳಿ ಕ್ರಾಸ್ ಬಸವೇಶ್ವರ ಬಸ್ ನಿಲ್ದಾಣದಲ್ಲಿ ವಾಸ್ತವ್ಯ ಮಾಡಿ ಬುಧವಾರ ಬೆಳಗ್ಗೆ ಉಪಹಾರ ಸೇವಿಸಿದ ಬಳಿಕ ಪಾದಯಾತ್ರೆ ಮುಂದುವರಿಸಿ ವಿಧಾನಸೌಧ ತಲುಪಲಿದೆ. ವಿಧಾನಸೌಧದ ಬಳಿ ಮುಖ್ಯಮಂತ್ರ ಬಸವರಾಜ ಬೊಮ್ಮಾಯಿ ಅವರಿಗೆ ಮನವ ಪತ್ರ ಸಲ್ಲಿಸುವ ಮೂಲಕ ಪಾದಯಾತ್ರೆಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ವೇಳೆ ಸಿಎಂ ಅವರಲ್ಲಿ ವಜಾ, ಅಮಾನತು, ವರ್ಗಾವಣೆ ಮತ್ತು ಪೊಲೀಸ್ ಕೇಸ್‌ಗಳನ್ನು ವಾಪಸ್ ಪಡೆಯುವಂತೆ ಮನವಿ ಮಾಡಲಾಗುವುದು ಎಂದು ನೌಕರರು ತಿಳಿಸಿದ್ದಾರೆ.
ನ.29ರಿಂದ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ತವರು ಜಿಲ್ಲೆ ಬಳ್ಳಾರಿಯಿಂದ ವಿಧಾನಸೌಧದ ವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಇಂದು 9ನೇ ದಿನಕ್ಕೆ ಕಾಲಿಟ್ಟಿದ್ದು ನಿರೀಕ್ಷೆಗೂ ಮೀರಿ ಸಾರಿಗೆಯ ನಾಲ್ಕೂ ನಿಗಮಗಳ ನೂರಾರು ನೌಕರರು, ಕನ್ನಡಪರ ಸಂಘನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದಾರೆ.
ಪಾದಯಾತ್ರೆ ಬಳ್ಳಾರಿ ಕೇಂದ್ರ ಬಸ್‌ನಿಲ್ದಾಣದಿಂದ ಆರಂಭವಾಗಿ- ಹಾನಗಹಲ್- ಚಳ್ಳಕೆರೆ – ಹಿರಿಯೂರು ಬೈಪಾಸ್ – ತುಮಕೂರು – ದಾಬಸ್‌ಪೇಟೆ – ನೆಲಮಂಗಲ – ಯಶವಂತಪುರ – ಮೇಖ್ರಿ ವೃತ್ತ – ಪ್ಯಾಲೇಸ್‌ಗುಟ್ಟಹಳ್ಳಿ ಮಾರ್ಗವಾಗಿ ಸಾಗುತ್ತಿದೆ.
ಇದೇ ಡಿ.13ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ನೌಕರರ ಪರವಾದ “ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಗಳ ಜಂಟಿ ಸಮಿತಿ” ನೇತೃತ್ವದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳುವುದಾಗಿ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.