ಚೆನ್ನೈ: ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಂಚರಿಸುತ್ತಿದ್ದ Mi-17V5 ಸೇನಾ ಹೆಲಿಕಾಪ್ಟರ್ ಇನ್ನೇನು ನಿಮಿಷಗಳ ಅಂತರದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ತಮಿಳುನಾಡಿನ ಊಟಿ ಬಳಿಯ ಕೂನೂರಿನಲ್ಲಿ ಪತನಗೊಂಡು ಈಗಾಗಲೇ 11 ಮಂದಿ ಸಾವನ್ನಪ್ಪಿದ್ದು ರಾವತ್ ಸೇರಿ 3 ಮಂದಿಯ ಸ್ಥಿತಿ ಗಂಭೀರವಾಗಿದೆ.
ತಮಿಳುನಾಡು ಪೊಲೀಸ್ ಮತ್ತು ಕೂನೂರಿನಲ್ಲಿರುವ ಭಾರತೀಯ ಸೇನಾ ಉನ್ನತ ಮೂಲಗಳ ಪ್ರಕಾರ, ರಾವತ್ ಪತ್ನಿ ಸೇರಿ 11 ಮಂದಿ ಸಾವನ್ನಪ್ಪಿದ್ದು, ರಾವತ್ ಹಾಗೂ ಇತರ ಮೂವರಿಗೆ ಸುಟ್ಟ ಗಾಯಗಳಾಗಿದ್ದು ಅವರಿಗೆ ಕೊಯಮತ್ತೂರು ಜನರಲ್ ಆಸ್ಪತ್ರೆಯಿಂದ ಆರು ತಜ್ಞ ವೈದ್ಯರ ತಂಡ ಕೂನೂರು ಸೇನಾ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಮುಂದುವರಿಸುತ್ತಿದ್ದಾರೆ.
ವೆಲ್ಲಿಂಗ್ಟನ್‍ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನಲ್ಲಿ ಇಂದು ಮಧ್ಯಾಹ್ನ ನಡೆಯಲಿದ್ದ ಕೆಡೆಟ್ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾವತ್ ಸೇರಿ 14 ಮಂದಿ ಹೆಲಿಕಾಪ್ಟರ್‌ನಲ್ಲಿ ಆಗಮಿಸುತ್ತಿದ್ದರು.
ಇನ್ನೇನು ಲ್ಯಾಂಡ್ ಆಗಲು 10 ಕಿ.ಮೀ. ಇರುವಂತೆ ಮಧ್ಯಾಹ್ನ 12.20ರ ಸುಮಾರಿಗೆ ಹೆಲಿಕಾಪ್ಟರ್ ಮರಕ್ಕೆ ಡಿಕ್ಕಿಯಾಗಿ ಪತನಗೊಂಡಿದೆ. ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದವರಲ್ಲಿ 11 ಮಂದಿ ಸಾವನ್ನಪ್ಪಿ, 3 ಮಂದಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ತೆರಳಿದ್ದಾರೆ.
ಬಿಪಿನ್ ರಾವತ್ ಅವರ ಸ್ಥಿತಿ ಗಂಭೀರ: ಇನ್ನು ಬಿಪಿನ್ ರಾವತ್ ಅವರ ಸ್ಥಿತಿ ಗಂಭೀರವಾಗಿದೆ. ಆದರೆ ಸುರಕ್ಷತೆ, ಸಾಮರ್ಥ್ಯದಲ್ಲಿ ಎಂಐ-17ವಿ5 ಹೆಲಿಕಾಪ್ಟರ್ ಬಹಳ ಹೆಸರುವಾಸಿ ಎಂಬ ವಿಚಾರ ಈಗ ಲಭ್ಯವಾಗಿದೆ.
ಭಾರತೀಯ ವಾಯುಪಡೆ ಹೆಚ್ಚಾಗಿ ಬಳಸುವ ಎಂಐ-17ವಿ5 ಆಧುನಿಕ ಸಾರಿಗೆ ಹೆಲಿಕಾಪ್ಟರ್ ಆಗಿದೆ. ಆಧುನಿಕ ಏವಿಯಾನಿಕ್ಸ್ ನೊಂದಿಗೆ ಸಜ್ಜುಗೊಂಡಿರುವ ಎಂಐ-17ವಿ5 ಹೆಲಿಕಾಪ್ಟರ್ ಯಾವುದೇ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿ, ಹಗಲು-ರಾತ್ರಿ ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಭಾರತೀಯ ವಾಯುಪಡೆಯು ಹೆಲಿಕಾಪ್ಟರ್ ಅನ್ನು ಸರಕು ಸಾಗಿಸಲು ಮಾತ್ರವಲ್ಲದೇ ರಕ್ಷಣಾ ಕಾರ್ಯ ಹಾಗೂ ಕಾರ್ಯಾಚರಣೆ ಪ್ರದೇಶಗಳಲ್ಲಿ ಸೇನೆಯನ್ನು ನಿಯೋಜಿಸಲು ಸಹ ಇದನ್ನು ಬಳಸಿಕೊಳ್ಳಬಹುದು.
ಸೋವಿಯತ್ ರಾಷ್ಟ್ರ ರಷ್ಯಾ ವಿನ್ಯಾಸಗೊಳಿಸಿರುವ ಹೆಲಿಕಾಪ್ಟರ್ ಇದಾಗಿದೆ. ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ನಿಗದಿತವಲ್ಲದ ಪ್ರದೇಶಗಳಲ್ಲೂ ಲ್ಯಾಂಡಿಂಗ್ ಆಗುವ ಸಾಮರ್ಥ್ಯವನ್ನು ಹೊಂದಿದೆ.
ಸುಮಾರು 1,300 ಕೆಜಿಯಷ್ಟು ತೂಕದ ವಸ್ತುಗಳನ್ನು ಹೊತ್ತು ಸಾಗಿಸಲು ಸಮರ್ಥವಾಗಿದೆ. ಅಲ್ಲದೇ ಗಂಟೆಗೆ ಸುಮಾರು 250 ಕಿ.ಮೀ.ನಷ್ಟು ವೇಗವಾಗಿ ಹಾರುವ ಸಾಮರ್ಥ್ಯವನ್ನು ಹೊಂದಿದೆ.
ರಷ್ಯಾ ನಿರ್ಮಿತ ಹೆಲಿಕಾಪ್ಟರ್ ಎಂಐ-17ವಿ5 ಪ್ರಧಾನ ಮಂತ್ರಿ ಸೇರಿದಂತೆ ಎಲ್ಲಾ ಗೌರವಾನ್ವಿತರ ಪ್ರಯಾಣಕ್ಕೆ ಬಳಸುವ ವಿಶ್ವಾಸಾರ್ಹ ವಿಮಾನವಾಗಿದೆ. ಇದು ಸಮರ್ಥ ಹೆಲಿಕಾಪ್ಟರ್‌ಗಳ ಸರಣಿಯ ಅಗ್ರಸ್ಥಾನದಲ್ಲಿದೆ.
ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ಭಾರತವು ಪಾಕಿಸ್ತಾನದ ಬಾಲ್‍ಕೋಟ್‍ನಲ್ಲಿ ವೈಮಾನಿಕ ದಾಳಿ ನಡೆಸಿದ ಮರುದಿನ ಅಂದರೆ 2019ರ ಫೆಬ್ರವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಒಂದು ಅಪಘಾತ ಹೊರತುಪಡಿಸಿದರೆ, ಈ ಹೆಲಿಕಾಪ್ಟರ್‌ನಿಂದ ಈವರೆಗೂ ಯಾವುದೇ ದೊಡ್ಡ ಅಪಘಾತ ಸಂಭವಿಸಿರಲಿಲ್ಲ.