ಬೆಂಗಳೂರು: ಕಳೆದ 10ನೇ ದಿನಗಳಿಂದ ನಡೆದ ಸ್ವಾಭಿಮಾನಿ ಸಾರಿಗೆ ನೌಕರರ ಪಾದಯಾತ್ರೆ ಯಾವುದೇ ಅಹಿತಕರ ಘಟನೆಗೆ ಆಸ್ಪದವಿಲ್ಲದೆ ಇಂದು ಮಧ್ಯಾಹ್ನ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಿದ್ದು, ಬಳಿಕ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯಿಂದ ಇಬ್ಬರು ಅಧಿಕಾರಿಗಳು ಬಂದು ಮನವಿ ಪತ್ರ ಸ್ವೀಕರಿಸಿದರು.ಈ ಮೂಲಕ ನೌಕರರ ಪಾದಯಾತ್ರೆ ಯಶಸ್ವಿಯಾದಂತಾಗಿದೆ.
ಈ ವೇಳೆ ನಾವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲೇಬೇಕು ಎಂದು ಪಾದಯಾತ್ರೆ ಬಂದ ನೌಕರರು ಪಟ್ಟು ಹೀಡಿದ ಹಿನ್ನಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ನಿವಾಸಕ್ಕೆ ನೌಕರರ ಮುಖಂಡರನ್ನು ಕರೆಸಿಕೊಂಡಿದ್ದು, ಅವರೊಂದಿಗೆ ವಜಾ, ಅಮಾನತು, ವರ್ಗಾವಣೆ, ಪೊಲೀಸ್ ಕೇಸ್ ಆಗಿರುವ ಸಂಬಂಧ ಚರ್ಚೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾತ್ರಿ 7.30ರ ಸುಮಾರಿಗೆ ಸಿಎಂ ನಿವಾಸಕ್ಕೆ ಹೋದ ನೌಕರರು ಮುಖಂಡರು 8.30 ಆದರೂ ವಾಪಸ್ ಫ್ರೀಡಂ ಪಾರ್ಕ್‌ಗೆ ಬಂದಿರಲಿಲ್ಲ. ಹೀಗಾಗಿ ಸಿಎಂ ನಿವಾಸದಿಂದ ಏನು ಸುದ್ದಿ ತರುತ್ತಾರೋ ಕೇಳಿಕೊಂಡು ಹೋಗೋಣ ಎಂದು 200 ಹೆಚ್ಚು ನೌಕರರು ಕತ್ತಲೇಯಲ್ಲೇ ಕುಳಿತುಕೊಂಡಿದ್ದಾರೆ. ಅಲ್ಲಿ ಒಂದು ಲೈಟ್ ವ್ಯವಸ್ಥೆ ಕೂಡ ಇಲ್ಲ.
ಈ ಎಲ್ಲದರ ನಡುವೆಯೂ ನ.29ರಿಂದ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ತವರು ಜಿಲ್ಲೆ ಬಳ್ಳಾರಿಯಿಂದ ವಿಧಾನಸೌಧದ ವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ನಿರೀಕ್ಷೆಗೂ ಮೀರಿ ಸಾರಿಗೆಯ ನಾಲ್ಕೂ ನಿಗಮಗಳ ನೂರಾರು ನೌಕರರು, ಕನ್ನಡಪರ ಸಂಘನೆಗಳ ಪದಾಧಿಕಾರಿಗಳು ಸಾಥ್ ನೀಡಿದ್ದು, ನೌಕರರ ಮೊಗದಲ್ಲಿ ಸಂತಸದ ಭಾವವನ್ನು ಚಿಮ್ಮಿಸಿತು.