ಬೆಂಗಳೂರು: ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಸ್ತುವಾರಿ ರೋಮಿ ಭಾಟಿಯವರು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಬೆಂಗಳೂರಿನ ವಿಜಯನಗರದಲ್ಲಿರುವ ಮಠದಲ್ಲಿ ಸ್ವಾಮೀಜಿಯವರನ್ನು ಗುರುವಾರ ಬೆಳಗ್ಗೆ ಭೇಟಿಯಾದ ಅವರು, ಆಮ್ ಆದ್ಮಿ ಪಾರ್ಟಿಯ ತತ್ತ್ವಸಿದ್ಧಾಂತಗಳನ್ನು ವಿವರಿಸಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಸರ್ಕಾರವು ಶಿಕ್ಷಣ, ಆರೋಗ್ಯ, ಸಾರಿಗೆ, ಸುರಕ್ಷತೆ ಹಾಗೂ ಮೂಲ ಸೌಕರ್ಯಗಳಿಗೆ ಸಂಬಂಧಿಸಿ ಕ್ರಾಂತಿಕಾರಿ ಬದಲಾವಣೆ ತಂದಿರುವುದನ್ನು ಸ್ವಾಮೀಜಿಯವರಿಗೆ ಮನವರಿಕೆ ಮಾಡಿಕೊಟ್ಟರು.
ಇನ್ನು ಕರ್ನಾಟಕದಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಶೇ. 40 ಭ್ರಷ್ಟಾಚಾರ ನಡೆಯುತ್ತಿರುವುದರ ವಿರುದ್ಧ ಹೋರಾಡಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದ್ದು, ಈ ಸದುದ್ದೇಶದ ಹೋರಾಟದಲ್ಲಿ ಯಶಸ್ಸು ಸಿಗುವಂತೆ ಆಶೀರ್ವಾದ ಮಾಡಬೇಕೆಂದು ರೋಮಿ ಭಾಟಿ ಮನವಿ ಮಾಡಿದರು.
ರೋಮಿ ಭಾಟಿಯವರಿಗೆ ಆಶೀರ್ವಾದ ಮಾಡಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು, “ದೆಹಲಿಯ ಅರವಿಂದ್ ಕೇಜ್ರಿವಾಲ್ ಅವರ ಆಡಳಿತದ ಬಗ್ಗೆ ಸಾಕಷ್ಟು ಕೇಳಿರುವೆ. ಅವರು ದೆಹಲಿಯಲ್ಲಿ ಜಾರಿಗೆ ತಂದಿರುವ ಜನಪರ ಯೋಜನೆಗಳು ನಮ್ಮಲ್ಲೂ ಜಾರಿಗೆ ಬರಲಿ. ಆಮ್ ಆದ್ಮಿ ಪಾರ್ಟಿಗೆ ಒಳಿತಾಗಲಿ. ರಾಜಕೀಯದಿಂದ ಭ್ರಷ್ಟಾಚಾರವನ್ನು ದೂರವಿಡುವ ನಿಮ್ಮ ಉದ್ದೇಶ ಶೀಘ್ರವೇ ಈಡೇರಲಿ” ಎಂದರು.
ಒಕ್ಕಲಿಗರ ಸಂಘದ ಚುನಾವಣೆಯ ಅಭ್ಯರ್ಥಿ ಚನ್ನಪ್ಪಗೌಡ ನೆಲ್ಲೂರು, ಎಎಪಿ ಮುಖಂಡರಾದ ನಂಜಪ್ಪ ಕಾಳೇಗೌಡ, ಲಕ್ಷ್ಮೀಕಾಂತ ರಾವ್, ಡಾ.ಸತೀಶ್ ಕುಮಾರ್, ಕುಶಲ ಸ್ವಾಮಿ, ಸುಹಾಸಿನಿ, ಡಾ. ರಮೇಶ್, ಜಗದೀಶ್ ಚಂದ್ರ ಇದ್ದರು.