- “ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಗಳ ಜಂಟಿ ಸಮಿತಿ” ನಿಯೋಗದಿಂದ ಸಿಎಂಗೆ ಮನವಿ
- ಮುಖ್ಯಮಂತ್ರಿಗಳು ನಾವು ಮತ್ತೆ ಮುಷ್ಕರಕ್ಕೆ ಇಳಿಯುವಂತ ವಾತಾವರಣವನ್ನು ಸೃಷ್ಟಿಸುವುದಿಲ್ಲ ಎಂಬ ನಂಬಿಕೆ ಇದೆ
- ಸಮಸ್ಯೆ ಸುಳಿಯಲ್ಲಿ ಸಲುಕಿರುವ ಎಲ್ಲ ನೌಕರರಿಗೂ ಒಳ್ಳೇದು ಮಾಡೋಣ ಎಂದ ಸಿಎಂ
ಬೆಂಗಳೂರು: ಬಳ್ಳಾರಿಯಿಂದ ಬೆಂಗಳೂರಿಗೆ ಸ್ವಾಭಿಮಾನಿ ಸಾರಿಗೆ ನೌಕರರು ಕಳೆದ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ ವಜಾ, ಅಮಾನತು, ವರ್ಗಾವಣೆ ಮತ್ತು ಪೊಲೀಸ್ ಕೇಸ್ ದಾಖಲಿಸಿರುವುದನ್ನು ವಾಪಸ್ ಪಡೆಯಬೇಕು ಎಂದು ನ.29ರಿಂದ 10ದಿನಗಳವರಗೆ ಪಾದಯಾತ್ರೆ ಹಮ್ಮಿಕೊಂಡು ಯಶಸ್ವಿಯಾಗಿದ್ದಾರೆ.
ಈ ನಡುವೆ ಸಾರಿಗೆ ನೌಕರರು ಬುಧವಾರ ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶಗೊಂಡು ಬಳಿಕ “ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಗಳ ಜಂಟಿ ಸಮಿತಿ ಮುಖಂಡರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ರಾತ್ರಿ 10ಗಂಟೆಗೆ ಭೇಟಿಯಾಗಿ ವಜಾಗೊಂಡಿರುವ ನೌಕರರನ್ನು ವಾಪಸ್ ತೆಗೆದುಕೊಳ್ಳುವಂತೆ ಮನವಿ ಮಾಡಿತು.
ಈ ವೇಳೆ ಸಿಎಂ ಮಾತನಾಡಿ, ಡಿ.10ರಂದು ವಿಧಾನಪರಿಷತ್ ಚುನಾವಣೆ ಇದೆ. ನಂತರ ಡಿ.13ರಿಂದ ಚಳಿಗಾಲದ ಅಧಿವೇಶನ ನಡೆಯಲಿದೆ. ಹೀಗಾಗಿ ಇದೆಲ್ಲ ಮುಗಿದ ಮೇಲೆ ನಿಮಗೆ ಒಂದು ದಿನ ಸಮಯ ನಿಗದಿ ಮಾಡಿ ಚರ್ಚಿಸಿದ ಬಳಿಕ ಸಮಸ್ಯೆ ಸುಳಿಯಲ್ಲಿ ಸಲುಕಿರುವ ಎಲ್ಲ ನೌಕರರಿಗೂ ಒಳ್ಳೇದು ಮಾಡೋಣ ಎಂದು ಹೇಳಿದರು.
ಆದರೆ, ಈಗಾಗಲೇ ನಾವು ನಿಮಗೆ ಮತ್ತು ಸಾರಿಗೆ ಸಚಿವರಿಗೆ ಹಲವಾರು ಬಾರಿ ಮನವಿಕೊಟ್ಟರು ಅದಾವುದಕ್ಕೂ ನಿಮ್ಮ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಆದಷ್ಟು ಶೀಘ್ರ ನೀವು ನೌಕರರ ಸಮಸ್ಯೆ ಬಗೆಹರಿಸಲೇ ಬೇಕು ಎಂದು ಒತ್ತಾಯಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನನಾಡಿದ ಸಿಐಟಿಯು, ನೌಕರರ ಸಮಿತಿ ಮುಖಂಡ ಮಂಜುನಾಥ್, ನೌಕರರ ಸಮಿತಿ ಮುಖಂಡರ ನಿಯೋಗ ಸಿಎಂ ಆವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಸಿಎಂ ಅವರು ಸದ್ಯ ಸಕರಾತ್ಮವಾಗಿ ಸ್ಪಂದಿಸಿದ್ದು, ಅಧಿವೇಶನ ಮುಗಿದ ಕೂಡಲೇ ನಿಮ್ಮನ್ನೊಳಗೊಂಡ ಅಧಿಕಾರಿಗಳ ಸಭೆ ನಡೆಸಿ ಅಲ್ಲಿ ಎಲ್ಲ ಸಮಸ್ಯೆಗಳನ್ನು ಚರ್ಚೆಸೋಣ ಎಂದು ಹೇಳಿದ್ದಾರೆ.
ಹೀಗಾಗಿ ನಾವು ಸಿಎಂ ಮಾತಿಗೆ ಒಪ್ಪಿಗೆ ನೀಡಿ ಬಂದಿದ್ದೇವೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ಭರವಸೆ ನಮಗಿದೆ. ಒಂದು ವೇಳೆ ಅವರು ಅಧಿವೇಶನ ನಡೆದು ವಾರ ಕಳೆದರೂ ನಮ್ಮನ್ನು ಸಭೆಗೆ ಕರೆಯಲಿಲ್ಲ ಎಂದಾದರೆ “ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಗಳ ಜಂಟಿ ಸಮಿತಿ ಪದಾಧಿಕಾರಿಗಳು ಬೇಡಿಕೆ ಈಡೇರಿಕೆ ಸಂಬಂಧ ಚರ್ಚಿಸಿದ ಬಳಿಕ ತೀವ್ರ ಹೋರಾಟ ಮಾಡುವ ಬಗ್ಗೆ ರೂಪುರೇಷೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಇನ್ನು ಮುಖ್ಯಮಂತ್ರಿಗಳು ನಾವು ಮತ್ತೆ ಮುಷ್ಕರಕ್ಕೆ ಇಳಿಯುವಂತ ವಾತಾವರಣವನ್ನು ಸೃಷ್ಟಿಸುವುದಿಲ್ಲ ಎಂಬ ನಂಬಿಕೆ ಇದೆ. ಅದು ಮೀರಿದರೆ ನಾವು ನೌಕರರ ನ್ಯಾಯಯುತ ಬೇಡಿಕೆ ಈಡೇರಿಕೆಗೆಗಾಗಿ ಧರಣಿ ನಡೆಸುವುದು ಅನಿರ್ವಾಯವಾಗಲಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಿದರು.
ವಜಾ, ಅಮಾನತು, ವರ್ಗಾವಣೆ ಮಾಡಿರುವ ನೌಕರರು ಮತ್ತೆ ತೆಗೆದುಕೊಳ್ಳಬೇಕು ಎಂದರೆ ಕಾನೂನಿನ ಸಮಸ್ಯೆ ಇದೆ ಎಂಬ ಸಬೂಬು ಹೇಳುತ್ತಿದ್ದಾರೆ. ಆದರೆ, ಇವರು ಮುಷ್ಕರದ ಸಮಯದಲ್ಲಿ ನೌಕರರನ್ನು ಕಾನೂನು ಚೌಕಟ್ಟಿನೊಳಗೆ ವಜಾ, ವರ್ಗಾವಣೆ ಮತ್ತು ಅಮಾನತು ಮಾಡಿದ್ದಾರಾ? ಇವರು ಮಾಡಿರುವುದೇ ಕಾನೂನು ಬಾಹಿರವಾಗಿ. ಅದರಲ್ಲಿ ಈಗ ಕಾನೂನು ತೊಡಕಿದೆ ಎಂದು ಹೇಳುತ್ತಿರುವುದು ನೌಕರರನ್ನು ದಾರಿತಪ್ಪಿಸುವ ಹುನ್ನಾರ ಎಂದು ಹೇಳಿದರು.
ಇನ್ನು ನೀವು ಹೇಗೆ ಸಾಮೂಹಿಕವಾಗಿ ವಜಾ, ವರ್ಗಾವಣೆ ಮತ್ತು ಅಮಾನತು ಮಾಡಿದ್ದೀರೋ ಹಾಗೆಯೇ ಮತ್ತೆ ಎಲ್ಲರನ್ನು ವಾಪಸ್ ಕರೆಸಿಕೊಳ್ಳಬೇಕು ಎಂಬುವುದು ನಮ್ಮ ಬಲವಾದ ಬೇಡಿಕೆ ಎಂದು ಕೂಡ ಆಗ್ರಹಿಸಿದರು.