ಬೆಂಗಳೂರು: ಮಂಡ್ಯ, ರಾಮನಗರ ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಂಗಳೂರು-ಮೈಸೂರು ರಸ್ತೆಯ ತಗ್ಗುಪದೇಶದಲ್ಲಿ ನೀರು ನಿಂತಿದ್ದು, ಶನಿವಾರ ಬೆಳ್ಳಂಬೆಳಗ್ಗೆ ಕಿಲೋ ಮೀಟರ್ ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಇತ್ತ ಪ್ರಯಾಣಿಕರು ಟ್ರಾಫಿಕ್ ಕಿರಿಕಿರಿ ಅನುಭವಿಸಿದ್ದಾರೆ. ಇನ್ನು ಟ್ರಾಫಿಕ್ ಸಮಸ್ಯೆ ಇದ್ದ ಕಾರಣಕ್ಕೆ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ ಪರೀಕ್ಷೆಗೆ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಲು ಸಾಧ್ಯವಾಗದ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿದೆ.
ವರುಣನ ಆರ್ಭಟಕ್ಕೆ ಮಂಡ್ಯ ತಾಲೂಕಿನ ದೊಡ್ಡಗರುಡನಹಳ್ಳಿಯಲ್ಲಿ ಕೆರೆ ಮತ್ತು ನಾಲೆ ಏರಿ ಒಡೆದು ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದೆ. ಕೆರೆಗೆ ಹೊಂದಿಕೊಂಡಂತೆ ವಿಶ್ವೇಶ್ವರಯ್ಯ ನಾಲೆಯಿದೆ. ದೊಡ್ಡಗರುಡನಹಳ್ಳಿ-ಶಿವಳ್ಳಿ ನಡುವೆ ಸಂಚಾರ ಸ್ಥಗಿತಗೊಂಡಿದೆ.
ಚನ್ನಪಟ್ಟಣದ ಶೇರ್ವಾ ಸರ್ಕಲ್ ಬಳಿ ರಸ್ತೆ ಬಿರುಕು ಬಿಟ್ಟಿದ್ದು, ಡಕ್ ಕುಸಿಯುವ ಹಂತದಲ್ಲಿದೆ. ಕೆರೆ ಕೋಡಿ ಬಿದ್ದ ಪರಿಣಾಮ ಡಕ್ ಶಿಥಿಲಗೊಂಡಿದ್ದು, ಅಪಾಯವನ್ನೂ ಲೆಕ್ಕಿಸದೆ ವಾಹನಗಳು ಸಂಚರಿಸುತ್ತಿವೆ. ಚನ್ನಪಟ್ಟಣ ನಗರ ಪ್ರದೇಶದಲ್ಲಿರುವ ಕುಡಿನೀರು ಕಟ್ಟೆ ತುಂಬಿ ಹರಿಯುತ್ತಿದೆ. ಬೀಡಿ ಕಾಲನಿ ಸಂಪೂರ್ಣ ಜಲಾವೃತಗೊಂಡಿದೆ.
ಇನ್ನು ರಸ್ತೆಗಳ ಮೇಲೆ 2-3 ಅಡಿ ನೀರು ನಿಂತ್ತಿದ್ದರಿಂದ ವಾಹನ ಸವಾರರು ಪರದಾಡಿದರು. ಕೆಲ ವೃತ್ತಗಳಲ್ಲಿ ವಾಹನಗಳು ಮುಂದಕ್ಕೆ ಹೋಗಲು ಸಾಧ್ಯವಾಗದೆ ಸವಾರರು ಹೈರಾಣಾದರು. ಕೆಲಸ ಮುಗಿಸಿ ಮನೆಗೆ ಹೋಗುವ ಧಾವಂತದಲ್ಲಿದ್ದ ಜನರು ಶುಕ್ರವಾರ ಸಂಕಷ್ಟ ಅನುಭವಿಸಿದ್ದು ಮಾತ್ರವಲ್ಲ, ಶನಿವಾರ ಬೆಳಗ್ಗೆ ಕೆಲಸಕ್ಕೆ, ಶಾಲಾ-ಕಾಲೇಜಿಗೆ ತೆರಳುವವರ ಪರಿಸ್ಥಿಯೂ ಇದೇ ಆಗಿತ್ತು.