ರಾಯಚೂರು: ಸಿರಿಧಾನ್ಯ ಬೆಳೆ ಪ್ರೋತ್ಸಾಹಿಸಲು ಕೆಪೆಕ್ ಸಂಸ್ಥೆಯ ಮೂಲಕ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ರೈತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಬಾರ್ಡ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಿರಿಧಾನ್ಯಗಳ ಅಭಿಯಾನ ಉದ್ಘಾಟಿಸಿ ಮತನಾಡಿದ ಅವರು, ಕಲ್ಯಾಣ ಕರ್ನಾಟಕದ ಪ್ರತಿ ಜಿಲ್ಲೆಗೆ ಒಂದು ಸಿರಿಧಾನ್ಯ ಗೊತ್ತುಪಡಿಸಿ ಬೆಳೆಯಬೇಕು. ಪ್ರತಿ ಜಿಲ್ಲೆಯಲ್ಲಿ ಸಂಸ್ಕರಣೆ ಘಟಕ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಸಿರಿಧಾನ್ಯಗಳ ಬಗ್ಗೆ ಗೊತ್ತಿದೆ. ಆದರೆ ಮುಂದೆ ಹೇಗೆ ತೆಗೆದುಕೊಂಡು ಹೋಗಬೇಕು ಎಂಬುದರ ದಾರಿ ಸ್ಪಷ್ಟವಾಗಬೇಕಿದೆ. ಹೀಗಾಗಿ ಈ ಮೇಳದ ನಂತರ ‘ರಾಯಚೂರು ಸಿರಿಧಾನ್ಯ ಘೋಷಣೆ’ಗಳನ್ನು ಪ್ರಕಟಿಸುವ ಮೂಲಕ ಕುಲಪತಿ ಅದರ ಮಾರ್ಗದರ್ಶಕರಾಗಬೇಕು ಎಂದು ಹೇಳಿದರು.
ಇನ್ನು ನಾನು ಅಕ್ಕಿ ಬದಲು ಸಿರಿಧಾನ್ಯವನ್ನೇ ಕಳೆದ 30 ವರ್ಷಗಳಿಂದ ಸೇವಿಸುತ್ತಿದ್ದೇನೆ. ಶೀಘ್ರದಲ್ಲೇ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ವ್ಯಾಪಾರ ಮೇಳ ಮಾಡಲಾಗುವುದು. ಆ ಮೂಲಕ ಎಲ್ಲೆಡೆಯೂ ಸಿರಿಧಾನ್ಯ ಪಸರಿಸುವಂತೆ ಮಾಡಲು ನಾನೂ ಉತ್ಸುಕನಾಗಿದ್ದೇನೆ ಎಂದರು.
ರಾಯಚೂರು ಒಂದು ಪ್ರಮುಖ ಕೃಷಿ ಕೇಂದ್ರ. ರಾಜ್ಯದಿಂದ ಒಂದು ಜವಳಿ ಪಾರ್ಕ್ ಇಲ್ಲಿ ಸ್ಥಾಪಿಸಲಾಗುವುದು. ಕಲಬುರಗಿಯಲ್ಲಿ ಕೇಂದ್ರದ ಜವಳಿ ಸ್ಥಾಪಿಸಲಾಗುವುದು ಎಂದ ಅವರು, ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಮಾಡಲಾಗುವುದು ಎಂದು ತಿಳಿಸಿದರು.
ಕನಕದಾಸರು ಅಂದಿನ ಕಾಲದಲ್ಲೇ ಅಕ್ಕಿ ಮತ್ತು ರಾಗಿ ಕುರಿತು ಉಲ್ಲೇಖಿಸಿದ್ದಾರೆ. ಇವೆರಡು ಧಾನ್ಯಗಳಲ್ಲಿ ರಾಗಿ ಶ್ರೇಷ್ಠ ಎಂಬುದನ್ನು ಹೇಳಿದ್ದಾರೆ. ಹೀಗಾಗಿ ರೈತರ ಹೋಲಗಳು ಸಂಶೋಧನಾ ಕೇಂದ್ರಗಳಾಗಬೇಕು. ಕೃಷಿ ವಿಜ್ಞಾನಿಗಳು ಪ್ರಯೋಗಾಲಯದಿಂದ ಹೊರಬಂದು ಸಂಶೋಧನೆ ಮಾಡಬೇಕು ಎಂದು ಹೇಳಿದರು.
ಇನ್ನು ಕಾರ್ಯಕ್ರಮ ಆಧಾರಿತ, ಹಣ ಆಧಾರಿತ ಸಂಶೋಧನೆಗಿಂತ ರೈತ ಆಧಾರಿತ ಸಂಶೋಧನೆ ಆರಂಭಿಸಬೇಕು. ಇದಕ್ಕೆ ಅಗತ್ಯ ನೆರವು ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ವಿಜ್ಞಾನಿಗಳು ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ಆ ಮೂಲಕ ನೈಜ ವಾತಾವರಣದಲ್ಲಿ ಇದ್ದು ಸಂಶೋಧನೆ ಮಾಡುವುದನ್ನು ಕೃಷಿ ವಿವಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.