ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕರ ತೀವ್ರ ಕೊರತೆ ಇದ್ದು, ಅದನ್ನು ನೀಗಿಸುವ ಸಲುವಾಗಿ ನಿಗಮದಲ್ಲಿ ಚಾಲಕ-ಕಂ-ನಿರ್ವಾಹಕ ನಿಯೋಜಿತ ಅನುಸೂಚಿಗಳನ್ನು ಕಾರ್ಯಾಚರಣೆ ಮಾಡುವ ಉದ್ದೇಶದಿಂದ ಹಿಂಬಾಗಿಲುಳ್ಳ ಸಂಸ್ಥೆಯ ವಾಹನಗಳನ್ನು ಮುಂಬಾಗಿಲುಳ್ಳ ಬಸ್‌ಗಳನ್ನಾಗಿ ವಿಭಾಗೀಯ ಮಟ್ಟದಲ್ಲಿ ಪರಿವರ್ತಿಸಿಕೊಳ್ಳಲು ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಿಡಿದ್ದಾರೆ.
ಈ ಸಂಬಂಧ ಆ.27ರಂದು (ಶಿನಿವಾರ) ಎಂಡಿ ಆದೇಶನುಸಾರ ಸಂಸ್ಥೆಯ ಮುಖ್ಯ ಯಾಂತ್ರಿಕ ಅಭಿಯಂತರರು ಹಿಂಬಾಗಿಲುಳ್ಳ ಕರ್ನಾಟಕ ಸಾರಿಗೆ ವಾಹನಗಳನ್ನು ಮುಂಬಾಗಿಲುಳ್ಳ ವಾಹನಗಳನ್ನಾಗಿ ವಿಭಾಗೀಯ ಮಟ್ಟದಲ್ಲಿ ಪರಿವರ್ತಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಧ್ಯಕ್ಷತೆಯಲ್ಲಿ ಇದೇ ಆಗಸ್ಟ್ 17, 18 ಮತ್ತು 19 -2022 ರಂದು ಕೇಂದ್ರ ಕಚೇರಿಯಲ್ಲಿ ನಡೆದ ವಿಭಾಗವಾರು ಕಾರ್ಯಾಚರಣೆ ಹಾಗೂ ಇತರ ಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚಿಸಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಅದಂತೆ ನಿಗಮದಲ್ಲಿ ಚಾಲಕರ ತೀವ್ರ ಕೊರತೆಯನ್ನು ನೀಗಿಸುವ ಸಲುವಾಗಿ ನಿಗಮದಲ್ಲಿ ಚಾಲಕ-ಕಂ-ನಿರ್ವಾಹಕ ನಿಯೋಜಿತ ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಲು ಸುಲಭವಾಗುವ ಸಲುವಾಗಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಹೀಗಾಗಿ ಪ್ರಸ್ತುತ ವಿಭಾಗಗಳಲ್ಲಿ, ಕಾರ್ಯಾಚರಣೆಯಲ್ಲಿರುವ ವಾಹನಗಳಲ್ಲಿ ಹಿಂಬಾಗಿಲುಳ್ಳ ಕರ್ನಾಟಕ ಸಾರಿಗೆ ವಾಹನಗಳ ಪ್ರಯಾಣಿಕರ ಬಾಗಿಲುಗಳನ್ನು ಮುಚ್ಚಿ ಮುಂಬಾಗಿಲುಳ್ಳ ಪ್ರಯಾಣಿಕರ ಬಾಗಿಲುಗಳನ್ನಾಗಿ (ನ್ಯೂಮ್ಯಾಟಿಕ್ ಅಳವಡಿಸಿ) ವಿಭಾಗೀಯ ಕಾರ್ಯಾಗಾರಗಳಲ್ಲಿ ಪರಿವರ್ತಿಸಿಕೊಳ್ಳಬೇಕು ಹಾಗೂ ಈ ಕಾರ್ಯಗಳಿಗೆ ಅವಶ್ಯಕವಾಗಿ ಬೇಕಾಗಿರುವ ಸಾಮಗ್ರಿಗಳನ್ನು ಪ್ರಾದೇಶಿಕ ಕಾರ್ಯಾಗಾರ, ಬೆಂಗಳೂರು ಹಾಸನ ಇಲ್ಲಿಂದ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.
ಈ ಕುರಿತು ತಮ್ಮ ವಿಭಾಗಗಳಲ್ಲಿ ಕೈಗೊಂಡ ಕ್ರಮವನ್ನು ಹಾಗೂ ಇದುವರೆವಿಗೂ ಹಿಂಬಾಗಿಲುಳ್ಳ ಕರ್ನಾಟಕ ಸಾರಿಗೆ ವಾಹನಗಳಲ್ಲಿ ಎಷ್ಟು ಸಂಖ್ಯೆಯ ವಾಹನಗಳನ್ನು ಮುಂಬಾಗಿಲುಳ್ಳ ವಾಹನಗಳನ್ನಾಗಿ ಪರಿವರ್ತಿಸಲಾಗಿದೆ ಎಂಬ ಮಾಹಿತಿಯನ್ನು ಕೂಡಲೇ ಈ ಕಚೇರಿಗೆ ನೀಡಬೇಕು ಹಾಗೂ ಮುಂದಿನ ದಿನಗಳಲ್ಲಿ ಪ್ರತಿ ಮಾಹೆ ಕನಿಷ್ಠ 10 ರಿಂದ 15 ವಾಹನಗಳನ್ನು ಪರಿವರ್ತಿಸುವಂತೆ ಆದೇಶ ಮಾಡಲಾಗಿದೆ.