ಯಳಂದೂರು: ಸ್ಮಶಾನಕ್ಕೆ ತೆರಳಲು ಸೇತುವೆ ಇಲ್ಲದಿರುವುದರಿಂದ ಆಕ್ರೋಶಗೊಂಡ ಗ್ರಾಮಸ್ಥರು ನಿಧನರಾದ ಮಹಿಳೆಯೊಬ್ಬರ ಅಂತ್ಯಕ್ರಿಯೆಯನ್ನು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ.
ಮಾಂಬಳ್ಳಿ ಗ್ರಾಮದ ಚಂದ್ರಮ್ಮ(48) ಎಂಬ ಮಹಿಳೆ ಇಂದು ನಿಧನ ಹೊಂದಿದರು. ಮಾಂಬಳ್ಳಿ ಗ್ರಾಮದಿಂದ ಸ್ಮಶಾನಕ್ಕೆ ತೆರಳಲು ಹೊನ್ನಹೊಳೆ ಎಂಬ ಕಾಲುವೆಯನ್ನು ದಾಟಿ ಹೋಗಬೇಕಿದೆ. ಆದರೆ ಸುವರ್ಣಾವತಿ ಜಲಾಶಯದ ಹೊರಹರಿವು ಹೆಚ್ಚಾಗಿರುವ ಕಾರಣ ಸ್ಮಶಾನಕ್ಕೆ ತೆರಳಿ ಅಂತ್ಯಸಂಸ್ಕಾರ ನೆರವೇರಿಸಲು ಅಸಾಧ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕಾಲುವೆಗೆ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರಿಗೆ ಹತ್ತಾರು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ. ಇದೇ ಕಾರಣಕ್ಕೆ ಆಕ್ರೋಶಿತ ಗ್ರಾಮಸ್ಥರು ಗುರುವಾರ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲೇ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಿ ಆಕ್ರೋಶ ಹೊರಹಾಕಿದರು.
ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರಿಗೆ ಹತ್ತಾರು ವರ್ಷಗಳಿಂದ ಮನವಿ ಮಾಡುತ್ತ ಬಂದಿದ್ದರೂ ಸೇತುವೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಇಂದು ಗ್ರಾ.ಪಂ ಕಚೇರಿ ಆವರಣದಲ್ಲೇ ಅಂತ್ಯಸಂಸ್ಕಾರ ನೆರವೇರಿಸಲು ಮುಂದಾಗಿದ್ದರು, ಈ ಸಂದರ್ಭದಲ್ಲಿ ಸ್ಥಳಕ್ಕೆ ಎಸಿ ಗೀತಾ ಹುಡೇದ, ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧಿಕರ ಮನ ಒಲಿಸಲು ಪ್ರಯತ್ನಿಸಿದಾದರೂ ವಿಫಲರಾಗಿ ವಾಪಸ್ ಹೋದರು.