ಕೊಳ್ಳೇಗಾಲ: ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಶ್ರೀಗಳ ಬಂಧನ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನ್ಯಾಯಾಲಯದಲ್ಲಿ ಬಾಲಕಿಯರ ಹೇಳಿಕೆ ದಾಖಲಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವಾಗ ನಾನು ನೀವು ಈ ಬಗ್ಗೆ ಮಾತನಾಡುವುದು ಸರಿ ಅಲ್ಲ. ಕಾನೂನು ಎಲ್ಲರಿಗೂ ಒಂದೇ. ಅದಕ್ಕೆ ತಲೆ ಬಾಗೋಣ. ಸಮಾಜದಲ್ಲಿ ಎಲ್ಲವೂ ಸರಿ ಇದೆ ಅಥವಾ ಸರಿ ಇಲ್ಲ ಎಂದು ಹೇಳುವಷ್ಟು ನೀಚ ನಾನಲ್ಲ ಎಂದರು.
ಇನ್ನು ಏನಾಗಿದೆ ಎಂಬುದರ ಕುರಿತು ಮಾಹಿತಿ ಇದೆ. ಈ ರೀತಿಯ ಪ್ರಕರಣ ನಡೆದಿರುವುದು ದುರಂತ. ಪ್ರಕರಣದ ಸತ್ಯಾಸತ್ಯತೆ ಹೊರಬರಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದು ತಿಳಿಸಿದರು.