ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ತಕರಾರು ಸಲ್ಲಿಸಲು ಅವಕಾಶ ಕಲ್ಪಿಸಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ವಿಚಾರಣೆಯನ್ನು ಸೆ.2 ಕ್ಕೆ ಮುಂದೂಡಿದರು.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಗುರಿಯಾಗಿರುವ ಶರಣರ ಪರವಾಗಿ ನಿರೀಕ್ಷಣಾ ಜಾಮೀನು ಕೋರಿ ವಕೀಲ ಕೆ.ಎನ್.ವಿಶ್ವನಾಥಯ್ಯ ಅವರು ಆ.29ರಂದು ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶೆ ಬಿ.ಕೆ.ಕೋಮಲಾ ಅರ್ಜಿ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಂಡರು.
ಈ ವೇಳೆ ಸಂತ್ರಸ್ತ ಬಾಲಕಿಯರ ಪರವಾಗಿ ಹೈಕೋರ್ಟ್ ವಕೀಲ ಶ್ರೀನಿವಾಸ್ ಹಾಗೂ ಕಾನೂನು ಸೇವಾ ಪ್ರಾಧಿಕಾರದ ವಕೀಲರು ಹಾಜರಾದರು. ಸಂತ್ರಸ್ತ ಬಾಲಕಿಯರು ಹಾಗೂ ಅವರ ತಂದೆಯ ಅಭಿಪ್ರಾಯ ಪರಿಗಣಿಸಿ ಶ್ರೀನಿವಾಸ್ ಅವರ ಅರ್ಜಿಯನ್ನು ಪರಿಗಣಿಸಿತು. ತಕರಾರು ಅರ್ಜಿ ಸಲ್ಲಿಕೆಗೆ ಒಂದು ದಿನ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಲಾಯಿತು.
ಇಂದು ಬೆಳಗ್ಗೆ 11ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆ ಅರ್ಜಿ ವಿಚಾರಣೆ ನ್ಯಾಯಾಧೀಶರ ಮುಂದೆ ಬಂದಿತು. ಆ ವೇಳೆ ಸಂತ್ರಸ್ತ ಬಾಲಕಿಯರನ್ನು ಕೋರ್ಟ್ಗೆ ಹಾಜರುಪಡಿಸಲಾಯಿತು. ಇತರ ಪ್ರಕರಣದಲ್ಲಿದ್ದ ವಕೀಲರನ್ನು ಹೊರ ಕಳುಹಿಸಿದ ನ್ಯಾಯಾಧೀಶರು, ಪ್ರಕರಣಕ್ಕೆ ಸಂಬಂಧಿಸಿದವರನ್ನು ಮಾತ್ರ ಉಳಿಸಿಕೊಂಡರು. ಬೆಳಗ್ಗೆ 11.40ಕ್ಕೆ ವಿಚಾರಣೆ ನಡೆಯಿತು ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಸೆ.2 ಕ್ಕೆ ಮುಂದೂಡಿದರು.