ಬೆಂಗಳೂರು: ನಗರದ ಆರ್ ಆರ್ ನಗರದ ಚನ್ನಸಂದ್ರ ಬಿಎಂಟಿಸಿ ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನಯ್ಯ ಹಾಗೂ ಸಹಾಯಕ ಟ್ರಾಫಿಕ್ ಕಂಟ್ರೋಲರ್ (ATS) ದಾಬೋಜಿ ಅವರ ಅಮಾನತು ಮಾಡಿರುವುದಕ್ಕೆ ಆಮ್ ಆದ್ಮಿ ಪಕ್ಷ ಚನ್ನಸಂದ್ರ ಡಿಪೋದಲ್ಲಿ ಸಿಹಿ ಹಂಚಿ ಭ್ರಷ್ಟರನ್ನು ಎಚ್ಚರಿಸಿತು.
ಈ ವೇಳೆ ಮಾತನಾಡಿದ ಪಕ್ಷದ ನಗರಾಧ್ಯಕ್ಷ ಮೋಹನ್ ದಾಸರಿ, ಇತ್ತೀಚಿನ ವರ್ಷಗಳಲ್ಲಿ ಡಿಪೋ ಮ್ಯಾನೇಜರ್ ಹಾಗೂ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಅಧಿಕಾರಿಗಳ ಕಿರುಕುಳ- ಮಾನಸಿಕ ಹಿಂಸೆಯನ್ನು ತಡೆಯಲಾರದೆ ಸಾರಿಗೆ ನೌಕರರು ಆತ್ಮಹತ್ಯೆಗೆ ಶರಣಾಗುತ್ತಿದ್ದರು. ಇದೇ ರೀತಿ ಚಾಲಕ ಹೊಳೆ ಬಸಪ್ಪ 4 ದಿವಸಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು.
ಆ ವೇಳೆ ನಮ್ಮ ಸತತ ಹೋರಾಟದ ಫಲವಾಗಿ ಇದೀಗ ಸಂಸ್ಥೆಯು ಅಧಿಕಾರಿಗಳನ್ನು ಅಮಾನತು ಮಾಡಿ ಕ್ರಮ ತೆಗೆದುಕೊಂಡಿರುವುದು ಸಾರಿಗೆ ನೌಕರರಲ್ಲಿ ಆಶಾಭಾವನೆಯನ್ನು ಮೂಡಿಸಿದೆ. ಯಾವುದೇ ಕಾರಣಕ್ಕೂ ನೌಕರರು ಆತ್ಮಹತ್ಯೆಯ ದಾರಿಯನ್ನು ಹಿಡಿಯಬಾರದು ಆಮ್ ಆದ್ಮಿ ಪಕ್ಷವು ಸದಾ ನೌಕರರ ಪರವಾಗಿ ಇರುತ್ತದೆ ಎಂದು ತಿಳಿಸಿದರು.
ಅಲ್ಲದೆ ಸಾರಿಗೆ ನೌಕರರ ಸಮಸ್ಯೆ ಆಲಿಸುವಲ್ಲಿ ವಿಫಲರಾಗಿರುವ ಸಾರಿಗೆ ಸಚಿವ ಶ್ರೀರಾಮಲು ಹಾಗೂ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರು ರಾಜೀನಾಮೆ ನೀಡಿ ಸಾರಿಗೆ ಸಂಸ್ಥೆಯನ್ನು ಉಳಿಸಬೇಕೆಂದು ಮೋಹನ್ ದಾಸರಿ ಹೇಳಿದರು.
ಪಕ್ಷದ ಮುಖಂಡರಾದ ಜಗದೀಶ್ ವಿ. ಸದಂ, ಸುರೇಶ್ ರಾಥೋಡ್, ಮುಖೇಶ್ ತೀರನ್, ನೌಕರರ ಮುಖಂಡರಾದ ಜಗದೀಶ್, ರಾಮು ಇನ್ನಿತರರು ಇದ್ದರು.