ನ್ಯೂಡೆಲ್ಲಿ: ಭಾರತದ ಅತಿದೊಡ್ಡ ಕಾರು ಕಳ್ಳನೆಂಬ ಕುಖ್ಯಾತಿ ಪಡೆದ ವ್ಯಕ್ತಿ ಅಂದರೆ, ದೇಶಾದ್ಯಂತ 5 ಸಾವಿರ ಕಾರುಗಳನ್ನು ಕದ್ದ ಆರೋಪ ಹೊತ್ತಿರುವಾತನನ್ನು ದೆಹಲಿ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
ಅನಿಲ್ ಚೌಹಾಣ್ (52) ಬಂಧಿತ. ಪೊಲೀಸರು ಈತನಿಂದ ಆರು ದೇಶೀಯ ನಿರ್ಮಿತ ಪಿಸ್ತೂಲ್‌ಗಳು ಮತ್ತು ಏಳು ಜೀವಂತ ಮದ್ದುಗುಂಡು, ಒಂದು ಕದ್ದ ಬೈಕನ್ನು ವಶ ಪಡಿಸಿಕೊಂಡಿದ್ದಾರೆ.
ಮೂವರು ಪತ್ನಿಯರು ಮತ್ತು ಏಳು ಮಂದಿ ಮಕ್ಕಳನ್ನು ಹೊಂದಿರುವ ಈತನ ವಿರುದ್ಧ 180 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾರು ಈ ಅನಿಲ್ ಚೌಹಾಣ್ : ಅಸ್ಸಾಂನ ತೇಜ್‌ಪುರ ಮೂಲದ ಖಾನ್‌ಪುರ ಎಕ್ಸ್‌ಟೆನ್ಶನ್‌ನ ನಿವಾಸಿ ಈತ. ದ್ವಿತೀಯ ಪಿಯುಸಿವರೆಗೆ ಓದಿದ್ದ ಅನಿಲ್ ಚೌಹಾಣ್ ಓದಿಗೆ ಗುಡ್‌ಬೈ ಹೇಳಿ 1998ರಿಂದಲೇ ವಾಹನಗಳನ್ನು ಕದಿಯಲು ಶುರುಮಾಡಿದ. ಇದು ಒಂದು ರೀತಿ ಚಾಳಿಯಾಗಿ ನಂತರ ಹಣ ಮಾಡುವ ಸುಲಭ ಮಾರ್ಗ ಎಂದು ತಿಳಿದ ಈತ ನಿತ್ಯ ಕಾರುಗಳನ್ನು ಕದಿಯುವ ಅಭ್ಯಾಸವನ್ನು ಕರಗತ ಮಾಡಿಕೊಂಡ ಅಂದಿನಿಂದ ಈವರೆಗೆ 5 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ವಿರುದ್ಧ ಈ ಹಿಂದೆಯೂ ಕಳವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹಲವು ಬಾರಿ ಜೈಲಿಗೆ ಕಳುಹಿಸಿದ್ದರು. ಶಿಕ್ಷೆ ಅನುಭವಿಸಿ ಹೊರ ಬಂದ ಬಳಿಕ ಮತ್ತೆ ಅದೇ ಚಾಳಿಯನ್ನು ಮುಂದುವರಿಸುತ್ತಿದ್ದ. ಅಲ್ಲದೆ ನಿಜಾಮುದ್ದೀನ್ ಪೊಲೀಸ್ ಠಾಣೆಯ ಕ್ರಿಮಿನಲ್ ಪ್ರಕರಣ ಒಂದರಲ್ಲಿ ಐದು ವರ್ಷ ಶಿಕ್ಷೆ ಅನುಭವಿಸಿದ್ದಾನೆ.
ಇದಕ್ಕೂ ಮೊದಲು ಅಸ್ಸಾಂ ಸರ್ಕಾರದಲ್ಲಿ ವರ್ಗ-1 ಗುತ್ತಿಗೆದಾರರಾಗಿದ್ದ ಈತನ ವಿರುದ್ಧ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಆ ವೇಳೆ ಈತನ ಅಕ್ರಮ ಆಸ್ತಿಯನ್ನು ವಶಪಡಿಸಿಕೊಂಡಿತ್ತು. ಬ್ಯಾಂಕ್ ಸಾಲಕ್ಕಾಗಿ ಆದ್ತಿಯನ್ನು ಹರಾಜು ಹಾಕಿತ್ತು. ಇದಾದ ಬಳಿಕ ಅನಿಲ್ ವಾಹನ ಕಳ್ಳತನಕ್ಕೆ ಇಳಿದಿದ್ದಾನೆ.ಆರೋಪಿ ಅನಿಲ್ ಈಶಾನ್ಯ ರಾಜ್ಯದಲ್ಲಿ ಘೇಂಡಾಮೃಗದ ಕೊಂಬಿನ ಕಳ್ಳಸಾಗಣೆಯಲ್ಲೂ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನ ಹೇಗಾಯ್ತು? ದೆಹಲಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಚಟುವಟಿಕೆಗಳು ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪತ್ತೆ ಹಚ್ಚಲು ಪೊಲೀಸರ ವಿಶೇಷ ತಂಡ ರಚಿಸಿದ್ದಾರೆ. ಆ ವೇಳೆ ಅನಿಲ್ ಚೌಹಾಣ್ ಬಗ್ಗೆ ಮಾಹಿತಿ ಸಿಕ್ಕು, ಆ ಖಚಿತ ಮಾಹಿತಿ ಆಧಾರಿಸಿ ಡಿಬಿಜಿ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದ ಅನಿಲ್ ಚೌಹಾಣ್‌ನನ್ನು ಆಗಸ್ಟ್ 23 ರಂದು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಕಳವು ವಿಚಾರ ಬಯಲಾಗಿದೆ.