ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ನೌಕರರ ಸರಣಿ ಆತ್ಮಹತ್ಯೆಗಳು ನಡೆಯುತ್ತಿದ್ದರೂ ತುಟಿ ಬಿಚ್ಚದ ಸಾರಿಗೆ ಸಚಿವ ಶ್ರೀರಾಮುಲು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಇದೇ ಸೆ.13ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ತಿಳಿಸಿದ್ದಾರೆ.
ಒಂದೇ ದಿನ ಮೂವರು ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಬ್ಬ, ಮತ್ತೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಕೂಡ ಸರ್ಕಾರ ನಿಗಮದ ಅಧಿಕಾರಿಗಳು ಹಾಗೂ ಸಾರಿಗೆ ಸಚಿವರು ಯಾವುದೇ ಸಲಹೆ, ಸಾಂತ್ವನ ನೀಡುವ ಸೌಜನ್ಯವನ್ನು ತೋರುತ್ತಿಲ್ಲ ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೌಕರರ ಸಮಸ್ಯೆ ಆಲಿಸದ ಸಾರಿಗೆ ಸಚಿವ ಶ್ರೀರಾಮುಲು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬರುವ ಮಂಗಳವಾರ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಬಳಿಕ ಸಚಿವರ ಮನೆಗೆ ನೂರಾರು ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಕಳೆದ 10ದಿನಗಳಲ್ಲಿ 6 ಮಂದಿ ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗೆ ಸರಣಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿದ್ದರು ಸಚಿವರಾದವರು ಏನು ಹೇಳದೆ ಕಿವಿ ಕಣ್ಣು ಬಾಯಿ ಮುಚ್ಚಿಕೊಂಡು ಕೂತಿರುವುದು ನಾಚಿಕೆಗೇಡಿನ ಸಂಗತಿ. ಇಂಥ ಸಚಿವರಿಂದ ನೌಕರರಿಗೆ ನ್ಯಾಯಯುತವಾಘಿ ಸಿಗಬೇಕಿರುವುದು ಸಿಗುವುದು ಕೂಡ ಡೌಟ್ ಹಾಗಾಗಿ ಇವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಸಾರಿಗೆ ನೌಕರರ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಸಚಿವ ಶ್ರೀರಾಮುಲು ಸಂಪೂರ್ಣ ವಿಫಲರಾಗಿದ್ದಾರೆ. ಅವರಿಗೆ ಹಣ ಮಾಡುವುದು ಮುಖ್ಯವಾಗಿದೆಯೇ ಹೊರತು ಸಾರಿಗೆ ವ್ಯವಸ್ಥೆಯ ಅಭಿವೃದ್ಧಿ ಹಾಗೂ ನೌಕರರ ಹಿತ ಬೇಕಾಗಿಲ್ಲ ಎಂದು ಆರೋಪಿಸಿದರು.
ಇನ್ನು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿಯವರು ಹಾಗೂ ಕೆಲವು ಉನ್ನತ ಅಧಿಕಾರಿಗಳಿಂದಾಗಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಭ್ರಷ್ಟಾಚಾರಕ್ಕೆ ಸಹಕರಿಸದ ಪ್ರಾಮಾಣಿಕ ನೌಕರರು ನಿರಂತರವಾಗಿ ಕಿರುಕುಳ ಅನುಭವಿಸಬೇಕಾಗಿದೆ ಎಂದು ಕಿಡಿಕಾರಿದರು.