ಮೈಸೂರು: ಈ ಬಾರಿ ಅದ್ದೂರಿ ದಸರಾ ಆಚರಣೆಗೆ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡು ಸಜ್ಜಾಗಿದೆ .ಆದರೆ, ಜಂಬುಸವಾರಿಗೆ ವರುಣ ಅಡ್ಡಿಯಾಗುತ್ತಾನೆ ಎಂಬ ಆತಂಕ ಈಗ ಮನೆ ಮಾಡಿದೆ.
ಕಾರಣ ನೈರುತ್ಯ ಮುಂಗಾರು ಹಿಂದಿರುಗುವುದರೊಂದಿಗೆ ಹವಾಮಾನ ವೈಪರಿತ್ಯದಿಂದ ಮುಂದಿನ ಐದು ದಿನಗಳು ಉತ್ತರ ಮತ್ತು ದಕ್ಷಿಣ ಒಳನಾಡು ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೀಗಾಗಿ ಈಗಾಗಲೇ ಬಿಟ್ಟುಬಿಟ್ಟು ಮತ್ತು ಬಿಟ್ಟು ಬಿಡದೆ ಹಲವೆಡೆ ಮಳೆಯಾಗುತ್ತಲೇ ಇದೆ. ಇದು ಮೈಸೂರಿನಲ್ಲೂ ಮಳೆರಾಯ ತನ್ನ ಆರ್ಭಟ ಮುಂದುವರಿಸುವ ಎಲ್ಲ ಸೂಚನೆಗಳನ್ನು ನೀಡುತ್ತಿದ್ದಾನೆ.
ಸೋಮವಾರ (ನಾಳೆಯಿಂದ) ರಾಜ್ಯದ ನಾನಾ ಭಾಗಗಳಲ್ಲಿ ಮಳೆ ಹೆಚ್ಚಾಗಲಿದೆ. ಅಷ್ಟೇ ಅಲ್ಲ. ಈಶಾನ್ಯ ಮಾನ್ಸೂನ್ ಪ್ರಾರಂಭವಾಗುವುದರೊಂದಿಗೆ ಅಕ್ಟೋಬರ್‌ನಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಆಂಧ್ರಪ್ರದೇಶ ಕರಾವಳಿಯ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿ ಮತ್ತು ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಇದರಿಂದಾಗಿ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯಾಗಲಿದೆ.
ಎರಡು ದಿನಗಳ ಕಾಲ ಬೆಂಗಳೂರು, ಶಿವಮೊಗ್ಗ, ಚಾಮರಾಜನಗರ, ದಾವಣಗೆರೆ ಸೇರಿದಂತೆ 12 ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಮಲೆನಾಡು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಬಾಗಲಕೋಟೆ, ಬೆಳಗಾವಿ, ವಿಜಯಪುರ, ದಕ್ಷಿಣ ಒಳನಾಡಿನ ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ಕಲಬುರಗಿ, ತುಮಕೂರಿನಲ್ಲಿ ಮಳೆಯಾಗಲಿದೆ. ಇನ್ನು ರಾಜ್ಯದ ಬಹುತೇಕ ಭಾಗದಲ್ಲಿ ಅಕ್ಟೋಬರ್‌ನಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದಲ್ಲಿ ಈ ಋತುವಿನಲ್ಲಿ ಶೇ.29ರಷ್ಟು ಅಧಿಕ ಮಳೆಯಾಗಿದೆ. ರಾಜ್ಯದಲ್ಲಿ ವಾಡಿಕೆಯಂತೆ ಸಾಮಾನ್ಯ 831.8 ಮಿ.ಮೀ ಆಗಬೇಕಿತ್ತು. ಆದರೆ 1,075.2 ಮಿಮೀ ಮಳೆಯಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ವಾಡಿಕೆ ಮಳೆ 550 ಮಿ.ಮೀ ಬೀಳಬೇಕಿತ್ತು. ಆದರೆ, 1,066 ಮಿ.ಮೀ ಮಳೆಯಾಗಿದೆ.