ಬೆಂಗಳೂರು: ಅಕ್ಟೋಬರ್ 21ರೊಳಗೆ ಪಂಚಮಸಾಲಿ ಲಿಂಗಾಯತರ ಮೀಸಲಾತಿ ವಿಚಾರದಲ್ಲಿ ಸ್ಪಷ್ಟ ನಿರ್ಧಾರವನ್ನು ಸರ್ಕಾರ ಪ್ರಕಟಿಸಬೇಕು ಎಂದು ಪಂಚಮಸಾಲಿ ಮಠದ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ನಗರಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಮಾಡುತ್ತಿರುವ ಹೋರಾಟ 2 ವರ್ಷ ತಲುಪಿದೆ. ಆದರೂ ಸರ್ಕಾರ ಯಾವುದೇ ತೀರ್ಮಾನ ನೀಡದೆ ಸುಮ್ಮನಾಗಿದೆ ಎಂದು ಕಿಡಿಕಾರಿದರು.
ಇನ್ನು ಹುಕ್ಕೇರಿಯಲ್ಲಿ ಅ.21 ರಂದು ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶ ನಡೆಯಲಿದೆ. ಅಷ್ಟರೊಳಗೆ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು ಲಿಂಗಾಯತ ಪಂಚಮಸಾಲಿಗೆ 2ಎ ಮೀಸಲಾತಿ ಕೊಡುವ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳಬೇಕು. ಇಲ್ಲದೆ ಇದ್ದರೆ ಹುಕ್ಕೇರಿ ಸಮಾವೇಶದಲ್ಲಿ ವಿಧಾನಸೌಧ ಮುತ್ತಿಗೆಗೆ ಕರೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಅಲ್ಪಸಂಖ್ಯಾತರ ಮೀಸಲಾತಿ ಕಿತ್ತು ನಮಗೆ ಕೊಡುವುದು ಬೇಡ ಹುಕ್ಕೇರಿ ಪಂಚಮಸಾಲಿ ಸಮಾವೇಶಕ್ಕೂ ಮೊದಲು ನಿಲುವು ತಿಳಿಸಬೇಕು. ಈಗಾಗಲೇ ಸರ್ಕಾರ ಲಿಂಗಾಯತ ಸಮುದಾಯದ 21 ಉಪಪಂಗಡಗಳಿಗೆ 2 ಎ ಮೀಸಲಾತಿ ಸ್ಥಾನ ನೀಡಿದೆ. ಅದೇ ರೀತಿಯಲ್ಲಿ ಸರ್ಕಾರ ನಮ್ಮ ಸಮುದಾಯಕ್ಕೂ ನೀಡಲಿ ಎಂಬುವುದು ನಮ್ಮ ಹಕ್ಕೊತ್ತಾಯವಾಗಿದೆ ಎಂದರು.
ಇನ್ನು ನಮಗಾಗಿ ಬೇರೊಬ್ಬರ ಮೀಸಲಾತಿ ಕಿತ್ತು ನಮಗೆ ಮೀಸಲಾತಿ ಕೊಡುವ ಅವಶ್ಯಕತೆ ಇಲ್ಲ, ನಿಧಾನವಾದರೂ ಸರಿ, ನಮಗೆ ಸಾಂವಿಧಾನಬದ್ಧವಾಗಿ ಮೀಸಲಾತಿ ದೊರಕಬೇಕು ಎಂದರು.
ಹುಕ್ಕೇರಿ ಸಮಾವೇಶದಲ್ಲಿ ಸುಮಾರು 1 ಲಕ್ಷ ಜನ ಸೇರಲಿದ್ದಾರೆ. ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳದೆ ಹೋದರೆ, ವಿಧಾನಸೌಧದ ಮುಂದೆ 25 ಲಕ್ಷ ಪಂಚಮಸಾಲಿ ಲಿಂಗಾಯತರನ್ನು ಸೇರಿಸಿ ಹೋರಾಟ ನಡೆಸಲಾಗುವುದು ಎಂದು ಹೆಳಿದ್ದಾರೆ.