ಮಾನ್ವಿ/ ಕೊಪ್ಪಳ: ಸರ್ಕಾರ ನೀಡಿರುವ ಲಿಖಿತ ಭರವಸೆಗಳ ಈಡೇರಿಕೆಗೆ ಹಾಗೂ ನೌಕರರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಇದೇ ಅಕ್ಟೋಬರ್ 10ರಂದು ಬೆಳಗ್ಗೆ 10 ಗಂಟೆಗೆ ಚಾಲನೆ ನೀಡಿರುವ ರಾಜ್ಯಾದ್ಯಂತ ಸೈಕಲ್ಜಾಥಾ ಯಶಸ್ವಿಯಾಗಿ ನಡೆಯುತ್ತಿದ್ದು, ಇಂದಿಗೆ 4 ನೇ ದಿನ ಪೂರೈಸಿದೆ.
ಮೊದಲ ದಿನ ಬಳ್ಳಾರಿಯಿಂದ ಹೊರಟ ಜಾಥಾ ಗಾಜಿಗನೂರು ಮಠದಲ್ಲಿ ವಾಸ್ತವ್ಯ ಹೂಡಿತು. ಅಲ್ಲಿಂದ ಹೊಸಪೇಟೆ ಮಾರ್ಗವಾಗಿ ಕೊಪ್ಪಳ ತಲುಪಿತು. ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅಂದು ಅಂದರೆ ಅ.11ರ ರಾತ್ರಿ ಕೊಪ್ಪಳದಲ್ಲೇ ವಾಸ್ತವ್ಯ ಹೂಡಿತು. ಅ.12ರಂದು ಗಂಗಾವತಿ ತಲುಪಿ ಅಲ್ಲಿ ವಾಸ್ತವ್ಯ ಹೂಡಿತು.
ಇನ್ನು ಇಂದು ಬೆಳಗ್ಗೆ 7 ಗಂಟೆಗೆ ಮಳೆಯ ನಡುವೆಯೇ ಹೊರಟ ಜಾಥಾ ಸರಿ ಸುಮಾರು 100 ಕಿಮೀ ಕ್ರಮಿಸಿದ್ದು, ಈ ರಾತ್ರಿ ಮಾನ್ವಿಯ ಬೆಟ್ಟದ ಗವಿಮಠದಲ್ಲಿ ವಾಸ್ತವ್ಯ ಹೂಡಿದೆ. ಇನ್ನು ನಾಳೆ ಬೆಳಗ್ಗೆ ಮಾನ್ವಿಯಿಂದ ಸುಮಾರು 50 ಕಿಮೀ ಕ್ರಮಿಸುವ ಮೂಲಕ ರಾಯಚೂರು ತಲುಪಿ ಅಲ್ಲೇ ವಾಸ್ತವ್ಯ ಹೂಡಲಿದ್ದು, ಅ.15ರಂದು ಬೆಳಗ್ಗೆ ಜಿಲ್ಲಾಧಿಕಾರಿಗಳ ಭೇಟಿ ಮಾಡಿ ಮನವಿಸಲ್ಲಿಸಲಿದೆ.
ಒಟ್ಟಾರೆ ಕಳೆದ ನಾಲ್ಕು ದಿನಗಳಿಂದ 190 ಕಿಮೀಗೂ ಹೆಚ್ಚು ಜಾಥಾ ಸಾಗಿದ್ದು, ಎಲ್ಲೆಡೆ ನಿಗಮದ ನೌಕರರು ಪ್ರೀತಿಯಿಂದ ಜಾಥಾವನ್ನು ಸ್ವಾಗತಿಸಿ, ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಈಗ ಆರಂಭವಾಗಿರುವ ಜಾಥಾ ಮಾಡು ಇಲ್ಲವೆ ಮಡಿ ಎಂಬಂತೆ ನಡೆಯುತ್ತಿದ್ದು, ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಬೇಡಿಕೆಗಳನ್ನು ಈಡೇರಿಕೊಳ್ಳಲೇ ಬೇಕು ಎಂಬುದಕ್ಕೆ ಅಚಲವಾಗಿದ್ದಾರೆ.
ಅ.10ರಂದು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಜಾಥಾಕ್ಕೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ರಜೆ, ವಾರದ ರಜೆ ಮತ್ತು ವಜಾಗೊಂಡಿರುವ ನೌಕರರು ಭಾಗಿಯಾಗುತ್ತಿದ್ದಾರೆ.
ಕಳೆದ 2021ರ ಏಪ್ರಿಲ್ನಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿ ಮುಷ್ಕರ ನಡೆಸಲಾಯಿತು. ಆ ವೇಳೆ ಬಿಎಂಟಿಸಿ ಅಧಿಕಾರಿಗಳು ಮನಸೋ ಇಚ್ಛೆ ನೌಕರರನ್ನು ವಜಾ, ಅಮಾನತು ಮಾಡಿದರು. ಇನ್ನು ಉಳಿದ ಮೂರು ನಿಗಮಗಳ ನೌಕರರಿಗೆ ವರ್ಗಾವಣೆ ಅಸ್ತ್ರ ಪ್ರಯೋಗಿಸಿ ಕಿರುಕುಳ ನೀಡಿದರು.
ತಮ್ಮ ಹಕ್ಕುಗಳಿಗೆ ಹೋರಾಟ ಮಾಡಿದ ನೌಕರರನ್ನು ವಜಾ ಮಾಡಿದ್ದು, ಆ ವಜಾವನ್ನು ರದ್ದುಗೊಳಿಸಬೇಕು. ಮಾನಸಿಕ ಹಿಂಸೆ ನೀಡುತ್ತಿರುವುದನ್ನು ತಪ್ಪಿಸಬೇಕು. ಸಾವಿರಾರು ರೂಪಾಯಿ ದಂಡ ಹಾಕಿರುವುದನ್ನು ವಾಪಸ್ ಕೊಡಬೇಕು. ಕಿರುಕುಳಗಳು ಡಿಪೋ ಮಟ್ಟದಲ್ಲಿ ನಿಲ್ಲಬೇಕು. ವೇತನದ ಮಾದರಿಯಲ್ಲೇ ನಮಗೂ ವೇತನ ನೀಡಬೇಕು.
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲೂ ಏಕಕಾಲಕ್ಕೆ ವೇತನ ಬಿಡುಗಡೆಯಾಗಬೇಕು. ಒಂದೊಂದು ನಿಗಮಗಳಲ್ಲಿ ತಮಗೆ ಇಷ್ಟ ಬಂದ ದಿನದಂದು ವೇತನ ಪಾವತಿ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಕೆಎಸ್ಆರ್ಟಿಸಿಯಲ್ಲಿ ಈ ತಿಂಗಳಿನಿಂದ ಅಳವಡಿಸಿಕೊಂಡಿರುವಂತೆ ಪ್ರತಿ ತಿಂಗಳ ಒಂದನೇ ತಾರೀಖಿಗೆ ವೇತನ ಎಂಬ ನಿಯಮವನ್ನು ಉಳಿದ ಮೂರು ನಿಗಮಗಳಲ್ಲೂ ಪಾಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದಿಷ್ಟೇ ಅಲ್ಲದೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಈ ಬೃಹತ್ ಜಾಥಾ ನಡೆಯುತ್ತಿದ್ದು, ಸರ್ಕಾರ ಸ್ಪಂದಿಸಬೇಕು, ನಮಗೂ ಇತರರಂತೆ ಬದುಕಲು ಅವಕಾಶ ನೀಡಬೇಕು ಎಂದು ಸರ್ಕಾರದ ಗಮನ ಸೆಳೆಯಲು ಹೊರಟಿದ್ದಾರೆ.