ಬೀದರ್: ಸರಕಾರ ಕೊಟ್ಟ ಲಿಖಿತ ಭರವಸೆಯಂತೆ ರಾಜ್ಯದ ಸಾರಿಗೆ ನೌಕರರಿಗೆ ವೇತನ ಆಯೋಗ ಜಾರಿಮಾಡುವಂತೆ ಸಾರಿಗೆ ಸಚಿವರ ತವರು ಜಿಲ್ಲೇ ಬೀದರ ವಿಭಾಗದ ವಿಭಾಗೀಯ ಕಚೇರಿ, ವಿಭಾಗೀಯ ಕಾರ್ಯಾಗಾರ, ಬೀದರ ಘಟಕ 1 ಮತ್ತು 2, ಹುಮನಾಬಾದ, ಬಸವಕಲ್ಯಾಣ, ಭಾಲ್ಕಿ ಹಾಗೂ ಔರಾದ ಘಟಕದ ಸಿಬ್ಬಂದಿ ನಾಳೆ ಸೈಕಲ್ ಜಾಥಾದಲ್ಲಿ ಭಾಗವಹಿಸಲಿದ್ದಾರೆ.
ವಾರದ ರಜೆ, ದೀರ್ಘ ರಜೆ , ಬದಲಿ ರಜೆ ,ಕರ್ತವ್ಯದಿಂದ ಇಳಿದವರು ಹಾಗೂ ಸಂಜೆ ಪಾಳೆಯ ಕರ್ತವ್ಯಕ್ಕೆ ಹೋಗುವವರು ಕೆಲವರು ಸಂದಿಗ್ಧ ಪರಸ್ಥಿತಿಯಲ್ಲಿ ಇದ್ದರೆ ಕುಟುಂಬದ ಸದಸ್ಯರನ್ನೊ , ಸ್ನೇಹಿತರನ್ನೋ ಅಥವಾ ಸಂಬಂಧಿಕರನ್ನೋ ಕಳುಹಿಸುವಂತೆ ಬೀದರ್ ವಿಭಾಗದ ಕೂಟದ ಅಧ್ಯಕ್ಷ ಬಸವರಾಜ ಚಾಮರೆಡ್ಡಿ ಮನವಿ ಮಾಡಿದ್ದಾರೆ.
ಅ.21ರಂದು ಬೆಳಗ್ಗೆ 10ಗಂಟೆಗೆ ಬೀದರ್ ಕೇಂದ್ರ ಬಸ್ ನಿಲ್ದಾಣದಲ್ಲಿ ಸಮಾವೇಶಗೊಳ್ಳಲಿದ್ದು, ಎಲ್ಲ ನೌಕರರು 15 ನಿಮಿಷ ಮುಂಚಿತವಾಗಿ ಬಂದು ಸೇರಬೇಕು. ಈ ಕೇಂದ್ರ ಬಸ್ ನಿಲ್ದಾಣ ದಿಂದ ಜಿಲ್ಲಾಧಿಕಾರಿ ಕಚೇರಿ ಯವರೆಗೆ ಜಾಥಾ ಹೊರಟು ಅಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಇಂದು ವೇತನ ಆಯೋಗ ಜಾರಿಗೆ ಒತ್ತಾಯಿಸಿ ಸಾರಿಗೆ ಸಚಿವರ ತವರು ಜಿಲ್ಲೆಯಿಂದ ಇದೇ ಅ.10ರಿಂದ ಪ್ರಾರಂಭವಾಗಿರುವ ಕೂಟದ ರಾಜಾಧ್ಯಕ್ಷರ ನೇತೃತ್ವದ ಬೃಹತ್ ಸೈಕಲ್ ಜಾಥಾ ಬೀದರ್ ವಿಭಾಗ ಪ್ರವೇಶ ಮಾಡಿದೆ.
ಈ ಹಿನ್ನೆಲೆಯಲ್ಲಿ ಬೀದರನಲ್ಲಿ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಸಮಸ್ತ ನೌಕರರು ಭಾಗವಹಿಸಬೇಕು ಎಂದು ಬೀದರ್ ವಿಭಾಗದ ಕೂಟದ ಗೌರವಾಧ್ಯಕ್ಷ ವಿಜಯಕುಮಾರ ಸೋನಾರೆ, ಪ್ರಧಾನ ಕಾರ್ಯ ದರ್ಶಿ ಜಗನಾಥ ಶಿವಯೋಗಿ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.